ವಿವಿಧ ಬಾಣಸಿಗರು ಭಿನ್ನ-ವಿಭಿನ್ನ ಶೈಲಿಯ ಪಾಕಗಳನ್ನು ಮಾಡುತ್ತಾರೆ. ಕೆಲವು ಆಹಾರಗಳು ನೋಡುಗರು ಕೂಡ ಪ್ರಯತ್ನಿಸುವಂತಿದ್ದರೆ, ಇನ್ನೂ ಕೆಲವು ನೋಡಿದರೆನೇ ವಾಕರಿಕೆ ಬರುವಂತಿರುತ್ತದೆ. ಅದು ಕುರ್ಕುರೆ ಮಿಲ್ಕ್‌ಶೇಕ್ ಆಗಿರಲಿ ಅಥವಾ ದೋಸೆ ಐಸ್ ಕ್ರೀಮ್ ಆಗಿರಲಿ. ವಿಭಿನ್ನ ಆಹಾರ ಭಕ್ಷ್ಯಗಳಿಗೆ ನೆಟ್ಟಿಗರು ಅಸಹ್ಯಪಟ್ಟುಕೊಳ್ಳುತ್ತಾರೆ. ಇದೀಗ, ಬೀದಿ ಆಹಾರ ಮಾರಾಟಗಾರರೊಬ್ಬರು ತಯಾರಿಸಿರುವ ವಿಭಿನ್ನ ಪರೋಟಾ ಪಾಕವು ಇಂಟರ್ನೆಟ್ ನಲ್ಲಿ ಗಿರಕಿ ಹೊಡೆಯುತ್ತಿದೆ.
ಆಹಾರ ಬ್ಲಾಗರ್ ಸೋನಿಯಾ ನೇಗಿ ಎಂಬುವವರು ವಿಭಿನ್ನ ಪರೋಟಾ ಮಾಡುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪರೋಟಾ ಹಿಟ್ಟಿಗೆ ಗುಲಾಬ್ ಜಾಮೂನ್ ಗಳನ್ನು ಸ್ಟಫ್ ಮಾಡಿ ಬಾಣಸಿಗ ಲಟ್ಟಿಸುತ್ತಾನೆ. ನಂತರ ಅದನ್ನು ತವಾಗೆ ಹಾಕಿ ತುಪ್ಪದಲ್ಲಿ ಚೆನ್ನಾಗಿ ಬೇಯಿಸುತ್ತಾನೆ. ಬಳಿಕ ಪರಾಠವನ್ನು ಗುಲಾಬ್ ಜಾಮೂನಿನ ಸಕ್ಕರೆ ಸಿರಪ್‌ನೊಂದಿಗೆ ಬಡಿಸುತ್ತಾನೆ.
ಈ ವಿಡಿಯೋಗೆ ಹಲವಾರು ಮಿಶ್ರ ಪ್ರತಿಕ್ರಿಯೆಗಳು ಮತ್ತು ಟನ್‌ಗಳಷ್ಟು ಕಾಮೆಂಟ್‌ಗಳು ಬಂದಿವೆ. ಕೆಲವು ಬಳಕೆದಾರರು ಈ ಭಕ್ಷ್ಯವನ್ನು ನೋಡಿ ಅಸಹ್ಯಪಟ್ಟುಕೊಂಡ್ರೆ, ಇನ್ನೂ ಕೆಲವರು ತಾವು ಪ್ರಯತ್ನಿಸಲು ಉತ್ಸುಕತೆ ತೋರಿದ್ದಾರೆ. ಪರೋಟಾದ ರುಚಿ ಅಸಾಧಾರಣವಾಗಿದೆ ಎಂದು ಸ್ವತಃ ಬ್ಲಾಗರ್ ಬರೆದಿದ್ದಾರೆ.