ಎರಡು ವರ್ಷಗಳ ಹಿಂದೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಮೂರು ತಿಂಗಳು ಕಾಲ ನಾಪತ್ತೆಯಾಗಿದ್ದು ಆ ಬಳಿಕ ಅವರು ತಮ್ಮ ಇರುವಿಕೆ ಘೋಷಿಸಿಕೊಂಡಿದ್ದರಾದರೂ ಈವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇದೀಗ ಚೀನಾದ ಮತ್ತೊಬ್ಬ ಪ್ರಮುಖ ಉದ್ಯಮಿ ನಾಪತ್ತೆಯಾಗಿದ್ದಾರೆ.
ಹೌದು, ಹೂಡಿಕೆ ಬ್ಯಾಂಕ್ ‘ರಿನೆಸಾನ್ಸ್ ಹೋಲ್ಡಿಂಗ್’ ಕಂಪನಿ ಸಿಇಒ ಬಾವೋ ಫಾನ್ ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರ ಸಂಪರ್ಕಕ್ಕೂ ಸಿಕ್ಕಿಲ್ಲವೆಂದು ಹೇಳಲಾಗಿದೆ. ಅವರು ನಾಪತ್ತೆಯಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಆ ಕಂಪನಿಯ ಶೇರುಗಳಲ್ಲಿ ಶೇಕಡ 50ರಷ್ಟು ಕುಸಿತವಾಗಿದೆ.
ದೊಡ್ಡ ಉದ್ದಿಮೆಗಳು ಹಾಗೂ ಟೆಕ್ ಕಂಪನಿಗಳನ್ನು ಗುರಿಯಾಗಿಸಿಕೊಂಡು ಚೀನಾ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಕಾರಣಕ್ಕಾಗಿಯೇ ಬಾವೋ ಫಾನ್ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.