ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಆರ್.ಜೆ.ಡಿ. ಹಾಗೂ ಕಾಂಗ್ರೆಸ್ ಗೆ ಫಂಡಿಂಗ್ ಮಾಡಿದ್ದಾರೆ. ಬಿಜೆಪಿ ಸೋಲಿಸಲು, ಪ್ರಧಾನಿ ಮೋದಿ ಕುಗ್ಗಿಸಲೆಂದು ಫಂಡಿಂಗ್ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಶೋಕಾಸ್ ನೋಟೀಸ್ ಬಂದಿದೆ. ನೋಟೀಸ್ ಗೆ 45 ಅಂಶಗಳನ್ನು ಉಲ್ಲೇಖಿಸಿ ಪತ್ರದ ಮೂಲಕ ಉತ್ತರ ನೀಡಿದ್ದೇನೆ. ಆದರೆ ಪತ್ರದಲ್ಲಿ ಎಲ್ಲಿಯೂ ವಿಷಾದ ಅಥವಾ ಕ್ಷಮೆ ಕೇಳಿಲ್ಲ ಎಂದರು.
ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನಾನು ಮಾಡಿದ ಆರೋಪಗಳ ಬಗ್ಗೆ ತನಿಖೆಯಾಗಬೇಕು. ಬಿಹಾರ ಚುನಾವಣೆಗೆ ಕೋಟ್ಯಂತರ ಹಣ ಫಂಡಿಂಗ್ ಮಾಡಿದ್ದಾರೆ. ವಿಜಯೇಂದ್ರ ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ. ಯಡಿಯೂರಪ್ಪ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಆಶಯಗಳಿಗೆ ತಕ್ಕಂತೆ ಆಡಳಿತ ನಡೆಯುತ್ತಿಲ್ಲ ಎಂದಿದ್ದಾರೆ. ಶೋಕಾಸ್ ನೋಟಿಸ್ ನಲ್ಲಿ ಇವೆಲ್ಲ ವಿಚಾರ ಉಲ್ಲೇಖಿಸಿದ್ದು, ಒಟ್ಟು 11 ಪುಟಗಳ ಉತ್ತರ ನೀಡಿದ್ದೇನೆ ಎಂದು ತಿಳಿಸಿದರು.