ಶಿವಮೊಗ್ಗ: ಮಾಜಿ ಸಿಎಂ ಸಿದ್ಧರಾಮಯ್ಯ ಅಲೆಮಾರಿ. ಅವರು ವಿಪಕ್ಷನಾಯಕ ಸ್ಥಾನ ಇಲ್ಲವೇ ಸಿಎಂ ಸ್ಥಾನ ಸೇರಿ ಯಾವುದಾದರೂ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಇಂಥವರು ಪ್ರಧಾನಿ ಬಗ್ಗೆ, ಆರ್.ಎಸ್.ಎಸ್. ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರೂ ಮತ್ತು ಮೋದಿ ಅವರನ್ನು ಹೋಲಿಕೆ ಮಾಡಿ ನೀಡಿದ ಹೇಳಿಕೆ ಹಾಗೂ ಆರ್.ಎಸ್.ಎಸ್. ಸಂಘಟನೆ ವಿದೇಶಿ ಸಂಘಟನೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ, ಈ ಕೂಡಲೇ ಸಿದ್ಧರಾಮಯ್ಯ ಅವರು ಜನರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಆರ್.ಎಸ್.ಎಸ್. ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಲು ಮತ್ತು ಹಿಂದುತ್ವ ಉಳಿಸಲು ಶ್ರಮಿಸುತ್ತಿದೆ. ನೆಹರೂ ಮತ್ತು ಅವರ ಸ್ನೇಹಿತರು ತಮ್ಮ ಅಧಿಕಾರದ ಆಸೆಗೆ ದೇಶವನ್ನು ಇಬ್ಬಾಗ ಮಾಡಿ ಹಿಂದೂಸ್ತಾನ ಮತ್ತು ಪಾಕಿಸ್ತಾನ ಎಂದು ಒಡೆದು ಹಾಕಿದ್ದರು. ಆದರೆ, ಪ್ರಧಾನಿ ಮೋದಿ ಕಾಶ್ಮೀರದಲ್ಲಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ತೆಗೆದುಹಾಕಿ ಈ ದೇಶಕ್ಕೆ ಒಂದೇ ಸಂವಿಧಾನ ಮತ್ತು ಧ್ವಜ ನಿಯಮ ಜಾರಿಗೆ ತಂದಿದ್ದಾರೆ. ವಿಶ್ವವೇ ಅವರನ್ನು ಮೆಚ್ಚಿಕೊಂಡಿರುವ ನಾಯಕರಾಗಿದ್ದಾರೆ ಎಂದು ಹೇಳಿದರು.
ಅಲೆಮಾರಿ ಸಿದ್ಧರಾಮಯ್ಯ ಅಧಿಕಾರಕ್ಕೋಸ್ಕರ ಒಂದ್ಸಲ ಚಾಮುಂಡೇಶ್ವರಿ, ಇನ್ನೊಮ್ಮೆ ಬಾದಾಮಿ. ಈಗ ಅಲ್ಲಿಯೂ ಸೋಲುವ ಭೀತಿಯಿಂದ ಜಮೀರ್ ಅಹ್ಮದ್ ಕ್ಷೇತ್ರಕ್ಕೆ ಹೋಗ್ತಾರೆ ಎಂದು ಕುಟುಕಿದರು.
ನಾವೆಲ್ಲಾ ಆರ್.ಎಸ್.ಎಸ್. ಹಿನ್ನಲೆಯಿಂದ ಬೆಳೆದು ಬಂದವರು. ಆರ್.ಎಸ್.ಎಸ್. ರಾಷ್ಟ್ರಭಕ್ತರನ್ನು, ಭಾರತ ಮಾತೆಯ ಪುತ್ರರನ್ನು ನಿರ್ಮಾಣ ಮಾಡಿದೆ. ಆದರೆ, ಸೋನಿಯಾ ವಿದೇಶಿಯರು. ಇಂದು ಕಾಂಗ್ರೆಸ್ ಇಟಲಿ ಪ್ರೇರಿತ ನಾಯಕತ್ವದ ಹಿಡಿತದಲ್ಲಿದೆ. ಹಿಂದೆ ಜೆಡಿಎಸ್ ನಲ್ಲಿದ್ದ ಸಿದ್ಧರಾಮಯ್ಯ ಅಧಿಕಾರಕ್ಕಾಗಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಅವರು ಆರ್.ಎಸ್.ಎಸ್. ಬಗ್ಗೆ ಮಾತನಾಡಲು ಅಯೋಗ್ಯರು ಎಂದರು.
ಇಂದು ದೇಶ ನಡೆಸುತ್ತಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಎಲ್ಲರೂ ಆರ್.ಎಸ್.ಎಸ್. ನಿಂದ ಬಂದವರು. ವಿದೇಶಿ ವ್ಯಕ್ತಿ ಸೋನಿಯಾ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ಸಿದ್ಧರಾಮಯ್ಯ ಕೂಡಲೇ ದೇಶದ ಜನ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಅಲೆಮಾರಿ ಸಿದ್ಧರಾಮಯ್ಯನವರಂತೆ ಆರ್.ಎಸ್.ಎಸ್. ಅಧಿಕಾರದಾಹಿಯಲ್ಲ. ಅಲೆಮಾರಿ ಸಿದ್ಧರಾಮಯ್ಯ ರಾಷ್ಟ್ರದ್ರೋಹಿ ಸಂಘಟನೆಗಳು ಬಂದ್ ಗೆ ಕರೆ ನೀಡಿದಾಗ ಬೆಂಬಲ ನೀಡಿದ್ದರು. ಹುಬ್ಬಳ್ಳಿಯಲ್ಲಿ ಗಲಾಟೆಗೆ ಕಾರಣನಾದ ಮೌಲ್ವಿಗೆ ಬೆಂಬಲಿಸಿದ್ದರು. ಇಂತಹ ಅಧಿಕಾರದಾಹಿ ಸಿದ್ಧರಾಮಯ್ಯನವರಿಗೆ ಜನ ಸರಿಯಾದ ಉತ್ತರ ಕೊಡುತ್ತಾರೆ. ಕೂಡಲೇ ಸಿದ್ಧರಾಮಯ್ಯ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಇನ್ನುಮುಂದೆ ಆರ್.ಎಸ್.ಎಸ್. ಮತ್ತು ಮೋದಿ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು ಎಂದರು.
ಇತಿಹಾಸಕಾರರು ದೇಶದಲ್ಲಿ 36 ಸಾವಿರ ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ ಎಂದು ಸಂಶೋಧನೆಗಳ ಮೂಲಕ ತೋರಿಸಿದ್ದಾರೆ. ಅವುಗಳ ಮರು ನಿರ್ಮಾಣ ಆಗಬೇಕಿದೆ. ಕಾಶಿಯಲ್ಲಿ ಈಶ್ವರ ಲಿಂಗವಿರುವ ಜಾಗದ ನೀರು ಬಳಸದಂತೆ ಕೋರ್ಟ್ ಹೇಳಿದೆ. ಕಾಂಗ್ರೆಸ್ ನವರು ಕೋರ್ಟ್ ತೀರ್ಪಗೆ, ಸಂವಿಧಾನಕ್ಕೆ ಬೆಲೆ ಕೊಡಲ್ಲ ಎಂದು ಟೀಕಿಸಿದರು.
ಔರಂಗಜೇಬ್ ಕೆಡವಿದ್ದ ಕಾಶಿ ದೇವಾಲಯವನ್ನು ಅಹಲ್ಯಾಬಾಯಿ ಹೋಳ್ಕರ್ ಮರು ನಿರ್ಮಾಣ ಮಾಡುತ್ತಾರೆ. ನಾನು ಮತ್ತು ಸಿದ್ಧರಾಮಯ್ಯ ಅದೇ ಸಂತತಿಯವರು. ಆದರೆ, ಸಿದ್ಧರಾಮಯ್ಯ ಈಗ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅವರು ಅಹಲ್ಯಾಬಾಯಿ ಹೋಳ್ಕರ್ ಅವರ ರಕ್ತ ಹಂಚಿಕೊಂಡಿದ್ದಾರೋ ಇಲ್ಲವೋ ಎನ್ನುವ ಅನುಮಾನ ಬರುತ್ತದೆ. ಅವರು ಜಿನ್ನಾ ಸಂತತಿಯವರು ಅನಿಸುತ್ತದೆ. ಅವರೀಗ ಸೋನಿಯಾ ಸಂತತಿಯವರು ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.