alex Certify ಆರ್ ಎಸ್ ಎಸ್ ಟೀಕಿಸುವುದನ್ನು ಸಿದ್ದರಾಮಯ್ಯ ನಿಲ್ಲಿಸದೆ ಹೋದರೆ ಅವರು ನಿರ್ನಾಮ ಆಗುತ್ತಾರೆ; ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ ಎಸ್ ಎಸ್ ಟೀಕಿಸುವುದನ್ನು ಸಿದ್ದರಾಮಯ್ಯ ನಿಲ್ಲಿಸದೆ ಹೋದರೆ ಅವರು ನಿರ್ನಾಮ ಆಗುತ್ತಾರೆ; ಈಶ್ವರಪ್ಪ

ಶಿವಮೊಗ್ಗ : ಆರ್ ಎಸ್ ಎಸ್ ಟೀಕಿಸುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನಿಲ್ಲಿಸದೆ ಹೋದರೆ ಅವರು ನಿರ್ನಾಮ ಆಗುತ್ತಾರೆ. ಕಾಂಗ್ರೆಸ್ ಪಕ್ಷ ಕೂಡ ನಿರ್ನಾಮ ಆಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.

ನಗರದಲ್ಲಿ ಇಂದು ಬಿಜೆಪಿ ಪಕ್ಷದ ಚುನಾವಣಾ ಕಾರ್ಯಾಲಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಲ್ಲೇ ಕಾರ್ಯಕ್ರಮಕ್ಕೆ ಹೋದರೂ ಆರ್ ಎಸ್ ಎಸ್ ನ್ನು  ನಿರ್ನಾಮ ಮಾಡಬೇಕು ಎಂದು ಹೇಳುತ್ತಾರೆ. ಆರ್ ಎಸ್ ಎಸ್ ಪ್ರಜಾಪ್ರಭುತ್ವವನ್ನು ಉಳಿಸಿದೆ. ಎಲ್ಲಾ ಹಿಂದುಳಿದವರಿಗೆ ದಲಿತರಿಗೆ ನ್ಯಾಯ ಸಿಗುವಂತೆ ಮಾಡಿದೆ. ಹೀಗಾಗಿ ಸಿದ್ದರಾಮಯ್ಯನವರು ಆರ್‌ಎಸ್‌ ಎಸ್ ಅನ್ನು ಟೀಕೆ ಮಾಡುವುದನ್ನು ಬಿಡದಿದ್ದರೆ ಅವರು ನಿರ್ನಾಮವಾಗುತ್ತಾರೆ. ಪಕ್ಷವು ನಿರ್ನಾಮವಾಗುತ್ತೆ ಎಂದು ಹೇಳಿದರು.

ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಕೇಂದ್ರೀಯ ನಾಯಕರು ಬಂದರೆ ಕಾಂಗ್ರೆಸ್ ನವರು ಟೀಕೆ ಮಾಡ್ತಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ,  ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಜೆ.ಪಿ. ನಡ್ಡಾ ರವರು, ಅಮಿತ್ ಶಾ ರವರು ಬಂದು ಹೋಗುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಿರುವುದರಿಂದ ಕಾಂಗ್ರೆಸ್ ನವರಿಗೆ ತಳಮಳವಾಗಿದೆ. ಅದಕ್ಕೂ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ನವರು ಬೇಕಾದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಕರೆಸಲಿ. ರಾಹುಲ್ ಗಾಂಧಿಯವರ ಮುಖ ತೋರಿಸಿ ಮತ ಪಡೆದುಕೊಳ್ಳಲಿ. ನಮ್ಮದೇನು ಅಭ್ಯಂತರವಿಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಬರ್ತಾರೆ ಅಂತ ಹೇಳುತ್ತಲೇ ಕೋಲಾರದ ಕಾರ್ಯಕ್ರಮವನ್ನು ಮೂರು ಬಾರಿ ಮುಂದೂಡಿದ್ದೀರಿ. ನಿಮಗೆ ನಾಯಕರುಗಳಿಲ್ಲ. ವಿಶ್ವ ಮೆಚ್ಚಿರುವಂತಹ ನಾಯಕರುಗಳು ಬಿಜೆಪಿಯಲಿದ್ದಾರೆ. ಅದಕ್ಕೋಸ್ಕರ ಅವರನ್ನು ರಾಜ್ಯಕ್ಕೆ ಕರೆಸುತ್ತಿದ್ದೇವೆ. ವಿಶ್ವದ ನಾಯಕರಾಗಿರುವ ನರೇಂದ್ರ ಮೋದಿಯವರು ನಮ್ಮ ಹೆಮ್ಮೆ ಎಂದರು.

ಬಿಜೆಪಿಗೆ ಚುನಾವಣೆಯಲ್ಲಿ ಒಳ್ಳೆಯ ವಾತಾವರಣವಿದೆ  ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರು ಜಾರಿಗೆ ತಂದ ಕೇಂದ್ರದ ಯೋಜನೆಗಳಿಂದಾಗಿ ಬಿಜೆಪಿಗೆ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಬಂಡೀಪುರದಲ್ಲಿ  ಹುಲಿ ಕಂಡಿದ್ದರೂ, ಕಾಣದಿದ್ದರೂ ಕಾಂಗ್ರೆಸ್ ನವರು ಟೀಕೆ ಮಾಡುತ್ತಾರೆ. ಒಂದು ಹುಲಿ ಕಂಡರೂ, ಕೇವಲ ಒಂದೇ ಹುಲಿನಾ ಅಂತ ಕೂಡ ಕಾಂಗ್ರೆಸ್ ನವರು ಪ್ರಶ್ನೆ ಮಾಡುತ್ತಾರೆ. ಟೀಕೆಯಲ್ಲಿಯೇ ಅವರು ಜೀವನ ಕಳೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಯಾವುದೇ ಪ್ರಶ್ನೆ ಉದ್ಭವವಾಗುವುದಿಲ್ಲ. ಹುಲಿ ಬರಲಿಲ್ಲ ಎನ್ನುವುದಕ್ಕಿಂತಲೂ ಮೋದಿಯೇ ದೊಡ್ಡ ಹುಲಿ. ಅವರು ಇಡೀ ಪ್ರಪಂಚದ ಹುಲಿ. ಅಂತ ಹುಲಿಯ ನೇತೃತ್ವ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಈ ಬಗ್ಗೆ ಕೋರ್ ಕಮಿಟಿ ಸಭೆಗೆ ಪ್ರತಿ ಕ್ಷೇತ್ರದಿಂದ 3 ಅಭ್ಯರ್ಥಿಗಳ ಹೆಸರನ್ನು ಕಳಿಸಿಕೊಡಲಾಗಿದೆ. ನೆನ್ನೆ ಮೊನ್ನೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ. ನಮ್ಮ ರಾಜ್ಯದ ನಾಯಕರಾದ ಬಿಎಸ್ ಯಡಿಯೂರಪ್ಪನವರು ಇಂದು ಸಂಜೆ 170 ರಿಂದ 180 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಎಂದರು.

ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ನಮ್ಮ ಕಾರ್ಯಕರ್ತರ ಅಪೇಕ್ಷೆಯಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತೆ.  ಕೇವಲ ಚುನಾವಣೆ ಸಂದರ್ಭದಲ್ಲಿ  ನಮ್ಮ ಕಾರ್ಯಕರ್ತರು ಕೆಲಸ ಮಾಡುವುದಿಲ್ಲ. ನಾಲ್ಕು ವರ್ಷ ಪಕ್ಷವನ್ನು ಸಂಘಟಿಸುವುದು ಸಮಾಜ ಸೇವೆಯಂತ ಜನಪರ ಕೆಲಸಗಳನ್ನು ಮಾಡುತ್ತಾರೆ ಎಂದರು.

ಯಾರೇ ಕಚೇರಿ ಮಾಡಿದರೂ  ನಮ್ಮದೇನು ತಕರಾರಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಅವಕಾಶವಿದೆ. ಎಂದು ತಮ್ಮದೇ ಪಕ್ಷದ ಮುಖಂಡ ಆಯನೂರು ಮಂಜುನಾಥ್ ಕಚೇರಿ ತೆರೆದಿರುವುದಕ್ಕೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...