
ವಿಶ್ವದಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಲಕ್ಷಣ ಆರಂಭವಾಗಿದ್ದು, ಇದನ್ನು ಎದುರಿಸುವ ಸಲುವಾಗಿ ಐಟಿ ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಕಾರ್ಯ ಆರಂಭಿಸಿವೆ. ಇದರ ಪರಿಣಾಮ ಈಗಾಗಲೇ ಸಾವಿರಾರು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ನಿರುದ್ಯೋಗ ಪರ್ವ ಮತ್ತಷ್ಟು ಮುಂದುವರೆಯಲಿದೆ.
ಅಮೆಜಾನ್, ಗೂಗಲ್, ಟ್ವಿಟ್ಟರ್ ಸೇರಿದಂತೆ ಘಟಾನುಘಟಿ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕಾರ್ಯ ಆರಂಭಿಸಿದ್ದು, ಇದು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಟೆಕ್ಕಿಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಅಮೆರಿಕಾದ ಬಹುತೇಕ ಐಟಿ ಕಂಪನಿಗಳಲ್ಲಿ ಭಾರತೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದು, ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಅಲ್ಲದೆ ಅಮೆರಿಕದಲ್ಲಿ ಹೆಚ್1 ವೀಸಾ ಹೊಂದಿರುವ ಉದ್ಯೋಗಿಗಳು ಕೆಲಸ ಕಳೆದುಕೊಂಡ ಬಳಿಕ ಮುಂದಿನ 60 ದಿನಗಳ ಒಳಗಾಗಿ ಮತ್ತೊಂದು ಕೆಲಸ ಹುಡುಕಿಕೊಳ್ಳುವುದು ಅನಿವಾರ್ಯವಾಗಿದ್ದು, ಇಲ್ಲವಾದರೆ ಅಂತವರ ವೀಸಾ ರದ್ದುಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಭಾರತಕ್ಕೆ ಮರಳದೆ ಮತ್ತೊಂದು ಆಯ್ಕೆ ಇರುವುದಿಲ್ಲ.
ಪ್ರಸಕ್ತ ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಳ್ಳುವ ಟೆಕ್ಕಿಗಳಿಗೆ ಹೊಸ ಉದ್ಯೋಗ ಸಿಗುವುದು ಸಹ ಕಷ್ಟ ಸಾಧ್ಯವಾಗಿದೆ. ಹೀಗಾಗಿ ತಮ್ಮ ಉದ್ಯೋಗ ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಬಹುತೇಕರು ಎದುರಿಸುತ್ತಿದ್ದಾರೆ.