ಬಿಎಂಟಿಸಿ, ಕೆಎಸ್ಆರ್ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಹಾಗೂ ವಾಯುವ್ಯ ಸಾರಿಗೆ ಈ ಅಷ್ಟು ನಿಗಮಗಳು ನಷ್ಟದಲ್ಲೆ ಸಾಗುತ್ತಿವೆ ಎನ್ನುವುದು ಹೊಸ ವಿಚಾರವಲ್ಲ. ಕೊರೋನಾಗು ಮುಂಚೆಯೆ ನಷ್ಟದಲ್ಲಿದ್ದ ಸರ್ಕಾರಿ ಸಾರಿಗೆ ನಿಗಮಗಳು, ಕೊರೋನಾ ನಂತರ ಮತ್ತಷ್ಟು ನಲುಗಿವೆ.
ಕೆಲ ತಿಂಗಳುಗಳಷ್ಟು ಕಾಲ ಸಂಪೂರ್ಣವಾಗಿ ಬಂದ್ ಆಗಿದ್ದ ಸಾರಿಗೆ ನಿಗಮಕ್ಕೆ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಹೀಗಾಗಿ ಈ ನಾಲ್ಕು ಸಾರಿಗೆಗಳನ್ನ ವಿಲೀನ ಮಾಡಿ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಸಾರಿಗೆ ನಿಗಮಗಳ ಪುನರ್ ರಚನಾ ಸಮಿತಿಗೆ ಸಲಹೆ ನೀಡಿದೆ.
1961 ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ 1997 ರಲ್ಲಿ ನಾಲ್ಕು ನಿಗಮಗಳಾಗಿ ವಿಂಗಡಣೆಯಾಗಿತ್ತು. ಆಗಲೂ ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಪ್ರತ್ಯೇಕ ನಿಗಮ ಬೇಡ ಎಂದಿತ್ತು. ಈಗ ಎಲ್ಲಾ ನಿಗಮಗಳು ನಷ್ಟದಿಂದ ಅನುಭವಿಸುತ್ತಿರುವ ಸಂಕಷ್ಟ ನೋಡಿ ಮತ್ತೆ ಅದೇ ಸಲಹೆ ನೀಡಿದೆ.
ಕೊರೋನಾ ಸಂಕಷ್ಟದಿಂದ ನಿಗಮಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬಸ್ ಗಳ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ ಭರಿಸಲು, ಅಷ್ಟೇ ಅಲ್ಲಾ ನೌಕರರಿಗೆ ಸಂಬಳ ನೀಡಲು ಹಣವಿಲ್ಲದೇ ನಿಗಮಗಳು ಪರದಾಡುತ್ತಿವೆ. 1997 ರಿಂದ ಇಲ್ಲಿಯವರೆಗೂ ಬರೋಬ್ಬರಿ 4500 ಕೋಟಿ ನಷ್ಟವಾಗಿದೆ. ನೌಕರರ ಪಿಎಫ್, ಎಲ್ಐಸಿ, ನಿವೃತ್ತಿ ವೇತನ ಸೇರಿ ಒಟ್ಟು 1700 ಕೋಟಿ ರೂಪಾಯಿ ಬಾಕಿ ಇದೆ. ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲೀನಗೊಳಿಸಿ, ಆಡಳಿತ ವಿಭಾಗದ ನಷ್ಟ ಸೇರಿದಂತೆ ಹಲವು ನಷ್ಟ ತಪ್ಪಿಸುವಂತೆ ಸಲಹೆ ನೀಡಿದ್ದೇವೆ. ನಿಗಮಗಳನ್ನ ವಿಲೀನಗೊಳಿಸುವದರಿಂದ ನೌಕರರ ಪರಿಸ್ಥಿತಿ ಹಾಗೂ ಸಾರಿಗೆ ನಿಗಮಗಳು ಎರಡು ಅಭಿವೃದ್ಧಿಯಾಗುತ್ತದೆ ಎಂದು, ಫೆಡರೇಶನ್ ನ ಅಧ್ಯಕ್ಷ ಅನಂತ್ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.