‘ಭಾರತ್ ಜೋಡೋ’ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಇಬ್ಬರು ಉದ್ಯಮಿಗಳು ಮಾತ್ರ ದಿನೇ ದಿನೇ ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದ್ದು, ಇದೀಗ ಬಿಜೆಪಿ ಮಾತೃ ಸಂಸ್ಥೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹ ಇದೇ ಅಭಿಪ್ರಾಯ ಹೊರ ಹಾಕಿರುವುದರಿಂದ ಮೋದಿ ಸರ್ಕಾರ ಪೇಚಿಗೆ ಸಿಲುಕುವಂತಾಗಿದೆ.
ಆರ್ ಎಸ್ ಎಸ್ ಸಂಘ ಸಂಸ್ಥೆ ‘ಸ್ವದೇಶಿ ಜಾಗರಣ ಮಂಚ್’ ನವ ದೆಹಲಿಯಲ್ಲಿ ಆಯೋಜಿಸಿದ್ದ ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಆರ್ ಎಸ್ ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೇಶದ ಶೇಕಡ 20ರಷ್ಟು ಆದಾಯ ಶೇ.1 ರಷ್ಟು ಮಂದಿಯ ಕೈಯಲ್ಲಿದೆ. ಇನ್ನು ದೇಶದ 50ರಷ್ಟು ಜನರ ಕೈಯಲ್ಲಿ ಕೇವಲ ಶೇಕಡ 13ರಷ್ಟು ಆದಾಯವಿದೆ ಎಂದು ಹೇಳಿದ್ದಾರೆ.
ದೇಶದ 23 ಕೋಟಿ ಜನರ ದಿನದ ಸರಾಸರಿ ಆದಾಯ ಕೇವಲ 375 ರೂಪಾಯಿಗಳಿಗಿಂತ ಕಡಿಮೆ ಎಂದು ಹೇಳಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ 20 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಉಳಿದಿದ್ದಾರೆ. ನಾಲ್ಕು ಕೋಟಿ ಯುವ ಜನತೆ ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರಲ್ಲದೆ, ಸರ್ಕಾರ, ದೇಶದ ಬೆನ್ನೆಲುಬಾಗಿರುವ ಯುವಜನರನ್ನು ಉದ್ಯಮಶೀಲರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.