ಬೆಂಗಳೂರು: ಕೋವಿಡ್ ನೆರಳಿನಲ್ಲಿಯೂ ದೇಶದ ಆರ್ಥಿಕತೆ ಸದೃಢವಾಗಿದೆ. ಆರ್ಥಿಕತೆ ಬೆಳವಣಿಗೆಗೆ ಪೂರಕವಾಗುವಂತಹ ಬಜೆಟ್ ಮಂಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕೋವಿಡ್ ಸಂಕಷ್ಟದ ನಡುವೆಯೂ ನಮ್ಮ ಆರ್ಥಿಕತೆ ಚೇತರಿಕೆಯಾಗಿದೆ. ಆರ್ಥಿಕತೆ ಇನ್ನಷ್ಟು ಅಭಿವೃದ್ಧಿಯಾಗುವಂತಹ ಒಂದು ಒಳ್ಳೆಯ ಮುನ್ಸೂಚನೆ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದರು.
ಉದ್ಯಮಗಳಿಗೆ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಜನಕಲ್ಯಾಣ ಯೋಜನೆಗಳು, ಪ್ರಧಾನ ಮಂತ್ರಿ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ. ಇನ್ನು ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆ ನೀಡುವ ನಿರೀಕ್ಷೆಯಿದೆ ಎಂದರು.
ಇಂದು ಕೇವಲ ಬಜೆಟ್ ಭಾಷಣ ಮಾಡುತ್ತಾರೆ. ಇಲಾಖಾವಾರು ಪೂರ್ಣಪ್ರಮಾಣದ ಮಾಹಿತಿ ತಿಳಿಯಲು ಎರಡು ದಿನ ಬೇಕು ಎಂದು ಹೇಳಿದರು.