ಪುದುಚೇರಿ: ದೇಶಾದ್ಯಂತ ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಸಹ, ಇನ್ನೂ ಅನೇಕ ಮಂದಿ ಹೆದರುತ್ತಿದ್ದಾರೆ. ಅದೆಷ್ಟೋ ಜನ ಇನ್ನು ಕೂಡ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. ಇದೀಗ ವ್ಯಕ್ತಿಯೊಬ್ಬರು ಲಸಿಕೆ ನಿರಾಕರಿಸಿರುವ ವಿಡಿಯೋ ವೈರಲ್ ಆಗಿದ್ದು, ನಗುತರಿಸುತ್ತದೆ.
ಆರೋಗ್ಯ ಕಾರ್ಯಕರ್ತರು ಮಂಗಳವಾರ ತಮ್ಮ ಗ್ರಾಮಕ್ಕೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬರು ಲಸಿಕೆ ನಿರಾಕರಿಸಿ ಮರವೇರಿ ಕುಳಿತಿರುವ ಘಟನೆ ಪುದುಚೇರಿಯ ವಿಲಿಯನೂರಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಲಸಿಕೆ ಹಿಂಜರಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ವ್ಯಕ್ತಿಯು ತನ್ನ ಮನೆಯ ಸಮೀಪವಿರುವ ಮರದ ಮೇಲೆ ಹತ್ತಿ ಕುಳಿತಿದ್ದಾರೆ. ಆರೋಗ್ಯ ಕಾರ್ಯಕರ್ತರು ಆತನನ್ನು ಕೆಳಗಿಳಿದು ಲಸಿಕೆ ಪಡೆಯುವಂತೆ ವಿನಂತಿಸಿದ್ದಾರೆ. ಆದರೆ, ತಾನು ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಆತ ಹೇಳಿದ್ದಾನೆ.
100 ಪ್ರತಿಶತದಷ್ಟು ಕೋವಿಡ್ -19 ಲಸಿಕೆ ಹಾಕುವ ಸಲುವಾಗಿ, ಪುದುಚೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು ಮನೆ-ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕೊನ್ನೇರಿಕುಪ್ಪಂ ಗ್ರಾಮಕ್ಕೆ ಭೇಟಿ ನೀಡಿದ್ದು, ಲಸಿಕೆ ತೆಗೆದುಕೊಳ್ಳದ ವ್ಯಕ್ತಿಯ ಮನೆಗೆ ತೆರಳಿದ್ದಾರೆ. ಕೂಡಲೇ ಈತ ಮರವೇರಿ ಕುಳಿತಿದ್ದು, ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾನೆ.
ಕೋವಿಡ್ -19 ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ವ್ಯಾಕ್ಸಿನೇಷನ್‌ನ ಪ್ರಾಮುಖ್ಯತೆಯ ಬಗ್ಗೆ ವ್ಯಕ್ತಿಗೆ ತಿಳಿಸಲು ಪ್ರಯತ್ನಿಸಿದ್ದು, ಸ್ಥಳೀಯರು ಕೂಡ ಮರದಿಂದ ಕೆಳಗಿಳಿಯುವಂತೆ ಆತನನ್ನು ಒತ್ತಾಯಿಸಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆ ವ್ಯಕ್ತಿ, ಜಪ್ಪಯ್ಯಾ ಅಂದ್ರು ಕೆಳಗಿಳಿಯಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಆರೋಗ್ಯ ಕಾರ್ಯಕರ್ತರು ಅಲ್ಲಿಂದ ತೆರಳಿದ್ದಾರೆ.