ಆರೋಗ್ಯದ ಮುನ್ಸೂಚನೆಯನ್ನ ನೀಡುತ್ತದೆ ನಿಮ್ಮ ನಾಲಗೆಯ ಬಣ್ಣ, ನಿಮ್ಮ ಕಣ್ಣು, ಉಗುರು ಹಾಗೂ ನಾಲಗೆಯ ಬಣ್ಣವು ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತದೆ. ನಿಮ್ಮ ನಾಲಗೆಯ ಬಣ್ಣದಲ್ಲಿ ಆಗುವ ಸಣ್ಣ ಬದಲಾವಣೆಯೂ ನಿಮ್ಮ ದೇಹದ ಆರೋಗ್ಯದ ಬಗ್ಗೆ ಮುನ್ಸೂಚನೆ ನೀಡುತ್ತದೆ. ಹಾಗಾದರೆ ಯಾವ ಬಣ್ಣದ ನಾಲಗೆ ಯಾವ ರೀತಿಯ ಮುನ್ಸೂಚನೆ ನೀಡುತ್ತದೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಸಾಮಾನ್ಯ ಬಣ್ಣ : ಸಾಮಾನ್ಯವಾಗಿ ನಾಲಗೆಯ ಬಣ್ಣ ತಿಳಿ ಗುಲಾಬಿಯಾಗಿದೆ. ನಾಲಗೆಯ ಮೇಲೆ ತಿಳಿ ಬಿಳಿ ಬಣ್ಣದ ಪದರವಿದ್ದರೂ ಯಾವುದೇ ಸಮಸ್ಯೆ ಇರೋದಿಲ್ಲ.
ಬಿಳಿ ನಾಲಗೆ : ನಿಮ್ಮ ನಾಲಗೆಯು ಬಿಳಿ ಬಣ್ಣದಾಗಿದ್ದರೆ ನೀವು ನಾಲಗೆಯನ್ನ ಶುಚಿಯಾಗಿ ಇಟ್ಟುಕೊಂಡಿಲ್ಲ ಎಂದು ಅರ್ಥ. ಅಲ್ಲದೇ ನಿಮ್ಮ ದೇಹವು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದೆ ಎಂಬುದರ ಮುನ್ಸೂಚನೆಯಾಗಿದೆ. ಜ್ವರ ಬಂದಾಗಲೂ ಸಹ ನಾಲಗೆ ಬಣ್ಣ ಬಿಳಿಯಾಗುತ್ತದೆ.
ಹಳದಿ ನಾಲಗೆ : ನಿಮ್ಮ ನಾಲಗೆಯು ಹಳದಿ ಬಣ್ಣಕ್ಕೆ ತಿರುಗಲು ಆರಂಭಿಸಿದೆ ಅಂದರೆ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗಿದೆ ಎಂದರ್ಥ. ಜೀರ್ಣ ವ್ಯವಸ್ಥೆಯಲ್ಲಿ ತೊಂದರೆ, ಯಕೃತ್ತಿನ ಮುನ್ಸೂಚನೆ ಕೂಡ ಹೌದು.
ಕಂದು ನಾಲಗೆ : ನೀವು ಅತಿಯಾಗಿ ಕಾಫಿ ಸೇವನೆ ಮಾಡುವವರಾಗಿದ್ದರೆ ನಿಮ್ಮ ನಾಲಗೆ ಕಂದು ಬಣ್ಣಕ್ಕೆ ತಿರುಗುತ್ತದೆ. ಧೂಮಪಾನಿಗಳಲ್ಲಿ ನಾಲಗೆಯು ಶಾಶ್ವತ ಕಂದು ಬಣ್ಣಕ್ಕೆ ತಿರುಗಿರುತ್ತದೆ.
ಕಪ್ಪು ನಾಲಗೆ : ನಿಮ್ಮ ನಾಲಗೆ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ ಎಂದರೆ ನೀವು ಜಾಗರೂಕರಾಗಿ ಇರೋದು ಒಳ್ಳೆಯದು. ಕ್ಯಾನ್ಸರ್, ಅಲ್ಸರ್ ಹಾಗೂ ಫಂಗಸ್ ಸೋಂಕಿನಿಂದ ನೀವು ಬಳಲುತ್ತಿದ್ದರೆ ನಿಮ್ಮ ನಾಲಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.