ಅನ್ನ ತಿನ್ನೋದು ಅಂದರೆ ಬೇಡ ಅನ್ನುವವರು ದಕ್ಷಿಣ ಭಾರತದ ಭಾಗದಲ್ಲಿ ಸಿಗೋದು ಕಡಿಮೆಯೇ. ಭಾರತೀಯ ಅಡುಗೆ ಮನೆಗಳಲ್ಲಿ ಅಕ್ಕಿಗೆ ವಿಶೇಷ ಮಹತ್ವವಿದೆ. ಈ ಅಕ್ಕಿಗಳಲ್ಲಿ ಹಲವು ವಿಧಗಳಿದೆ. ಇದರಲ್ಲಿ ಪ್ರಮುಖವಾಗಿ ಬೆಳ್ತಿಗೆ ಅಕ್ಕಿ ( ಬಿಳಿ ಅಕ್ಕಿ) ಹಾಗೂ ಕುಚಲಕ್ಕಿ ಸಾಮಾನ್ಯವಾಗಿ ಬಳಕೆಯಾಗುವ ಅಕ್ಕಿಯಾಗಿದೆ. ಹಾಗಾದರೆ ಈ ಎರಡು ಅಕ್ಕಿಗಳಲ್ಲಿ ಯಾವುದು ಆರೋಗ್ಯಕ್ಕೆ ಸೂಕ್ತ ಅನ್ನೋದನ್ನ ತಿಳಿದುಕೊಳ್ಳೋಣ.
ಬೆಳ್ತಿಗೆ ಅಕ್ಕಿ : ಬಿಳಿ ಅಕ್ಕಿಯನ್ನು ಸೇವನೆ ಮಾಡಿದಲ್ಲಿ ತೂಕ ಏರಿಕೆಯಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹೀಗಾಗಿ ಅನೇಕರು ಬಿಳಿ ಅಕ್ಕಿಯನ್ನು ಸೇವನೆ ಮಾಡಲು ಹಿಂಜರಿಯುತ್ತಾರೆ. ಬಿಳಿ ಅಕ್ಕಿ ಅತಿಯಾಗಿ ಸಂಸ್ಕರಿಸಿದ ಪದಾರ್ಥವಾಗಿದೆ. ಬಿಳಿ ಅಕ್ಕಿಯ ಮೇಲಿನ ಹೊಳಪು ಸಂಸ್ಕರಣೆಯಿಂದ ಬಂದದ್ದಾಗಿದೆ. ಆದ್ದರಿಂದ ಬಿಳಿ ಅಕ್ಕಿಯ ಸೇವನೆಯಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗೋದಿಲ್ಲ. ಸಂಸ್ಕರಣೆಯಿಂದಾಗಿ ಅಕ್ಕಿಯು ತನ್ನಲ್ಲಿರುವ ವಿಟಾಮಿನ್ ಬಿ, ಥಯಾಮಿನ್ನಂತಹ ಉಪಯುಕ್ತ ಪೋಷಕಾಂಶಗಳನ್ನು ಕಳೆದುಕೊಂಡು ಬಿಡುತ್ತದೆ. ಹಾಗಂತ ಬೆಳ್ತಿಗೆ ಅಕ್ಕಿಯ ಸೇವನೆಯಿಂದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂಬರ್ಥವೂ ಅಲ್ಲ. ಇದೊಂದು ಕಾರ್ಬೋಹೈಡ್ರೇಟ್ನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಆಹಾರ ಪದಾರ್ಥವಾಗಿದೆ. ಹಾಗೂ ಬಿಳಿ ಅಕ್ಕಿಯ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಪೂರೈಕೆ ಆಗಲಿದೆ.
ಕುಚಲಕ್ಕಿ : ಕುಚಲಕ್ಕಿ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರೋದಿಲ್ಲ. ಕರಾವಳಿ ಭಾಗದಲ್ಲಿ ಈಗಲೂ ಕೂಡ ಕುಚಲಕ್ಕಿಯನ್ನೇ ಬಳಸಲಾಗುತ್ತದೆ. ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಕುಚಲಕ್ಕಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಬಿಳಿ ಅಕ್ಕಿ ಹಾಗೂ ಕುಚಲಕ್ಕಿ ನಡುವೆ ಇರುವ ವ್ಯತ್ಯಾಸ ಒಂದೇ. ಬಿಳಿ ಅಕ್ಕಿ ಅತಿಯಾದ ಸಂಸ್ಕರಣೆಗೆ ಒಳಗಾದ್ರೆ ಕುಚಲಕ್ಕಿಯು ಸಂಸ್ಕರಣೆ ಕಾರ್ಯಕ್ಕೆ ಹೋಗೋದಿಲ್ಲ. ಆದರೆ ಕುಚಲಕ್ಕಿಯ ಅನ್ನವನ್ನ ಮಾಡೋದು ಬಿಳಿ ಅಕ್ಕಿ ಅನ್ನ ಮಾಡಿದಷ್ಟು ಸುಲಭವಲ್ಲ. ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ದಿನನಿತ್ಯ ಕುಚಲಕ್ಕಿ ಸೇವನೆ ಮಾಡೋದ್ರಿಂದ ಮಧುಮೇಹದ ಅಪಾಯವನ್ನು 60 ಪ್ರತಿದಷ್ಟು ಕಡಿಮೆ ಮಾಡಬಹುದಾಗಿದೆ. ಕುಚಲಕ್ಕಿಯಲ್ಲಿ ಮ್ಯಾಗ್ನಿಷಿಯಂ, ಕಬ್ಬಿಣಾಂಶ ಹಾಗೂ ಜಿಂಕ್ ಅಗಾಧ ಪ್ರಮಾಣದಲ್ಲಿ ಅಡಗಿದೆ.