ಸೋಯಾ ಬೀನ್ ನಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಯಾಬಿನ್ ಬಳಸಿಕೊಂಡು ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಕಾಯಿ ಚಟ್ನಿ, ಸಾಂಬಾರಿನ ಜತೆ ಇದನ್ನು ತಿನ್ನುವುದಕ್ಕೆ ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಇಡ್ಲಿ ಅಕ್ಕಿ, 1 ¼ ಕಪ್ – ಉದ್ದಿನಬೇಳೆ, 1 ಟೀ ಸ್ಪೂನ್ – ಮೆಂತೆಕಾಳು, 1 ಟೀ ಸ್ಪೂನ್ – ಕಡಲೆಬೇಳೆ, ರುಚಿಗೆ ತಕ್ಕಷ್ಟು – ಉಪ್ಪು, ನೀರು – ಅಗತ್ಯವಿರುವಷ್ಟು, ತುಪ್ಪ – ಸ್ವಲ್ಪ.
ಮಾಡುವ ವಿಧಾನ:
ಸೋಯಾ ಬೀನ್ ಅನ್ನು ತೊಳೆದು ಒಂದು ಬೌಲ್ ನಲ್ಲಿ ನೆನೆಸಿಡಿ. ನಂತರ ಮೆಂತೆಕಾಳು, ಉದ್ದಿನಬೇಳೆ, ಕಡಲೆಬೇಳೆ ಇವಿಷ್ಟನ್ನು ಚೆನ್ನಾಗಿ ತೊಳೆದು ಇನ್ನೊಂದು ಬೌಲ್ ನಲ್ಲಿ ನೆನೆಸಿಡಿ. ಹಾಗೇ ಅಕ್ಕಿಯನ್ನು ತೊಳೆದು ಒಂದು ಪಾತ್ರೆಯಲ್ಲಿ ನೆನೆಸಿಡಿ. 6 ಗಂಟೆಗಳ ಕಾಲ ಇವಿಷ್ಟು ಚೆನ್ನಾಗಿ ನೆನೆಯಲಿ. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಕಡಲೆಬೇಳೆ, ಉದ್ದಿನಬೇಳೆ, ಮೆಂತೆ ಕಾಳು ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ನಂತರ ಅಕ್ಕಿಯನ್ನು ರುಬ್ಬಿ ಆ ಪಾತ್ರೆಗೆ ಹಾಕಿ. ಹಾಗೇ ಸೋಯಾಬಿನ್ ಅನ್ನು ಕೂಡ ಸ್ವಲ್ಪ ನೀರು ಸೇರಿಸಿ ರುಬ್ಬಿ ಪಾತ್ರೆಗೆ ಹಾಕಿ. ಇವು ಮೂರನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ 8 ಗಂಟೆಗಳ ಕಾಲ ಹಾಗೆಯೇ ಇಟ್ಟು ಬಿಡಿ. ಬೆಳಿಗ್ಗೆ ಮತ್ತೊಮ್ಮೆ ಮಿಕ್ಸ್ ಮಾಡಿಕೊಂಡು ಗ್ಯಾಸ್ ಮೇಲೆ ದೋಸಾ ತವಾ ಇಟ್ಟು ಅದಕ್ಕೆ ಈ ಹಿಟ್ಟು ಹಾಕಿ ದೋಸೆ ಮಾಡಿಕೊಳ್ಳಿ. ಮೇಲುಗಡೆ ತುಪ್ಪ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡರೆ ರುಚಿಕರವಾದ ಸೋಯಾಬಿನ್ ದೋಸೆ ಸವಿಯಲು ಸಿದ್ಧ.