ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಿಗೆ ಈ ಸೊಪ್ಪಿನ ಸಾರು ಅಷ್ಟಾಗಿ ಹಿಡಿಸುವುದಿಲ್ಲ. ಅದು ಅಲ್ಲದೇ, ಮಕ್ಕಳಂತೂ ಈ ಸೊಪ್ಪು ಎಂದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಇಲ್ಲಿ ರುಚಿಕರವಾದ ಮೆಂತೆ ಸೊಪ್ಪಿನ ಸಾರು ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಎರಡು ಕಟ್ಟು ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಅದರ ಎಲೆಗಳನ್ನು ಮಾತ್ರ ಬಿಡಿಸಿಕೊಳ್ಳಿ. ½ ಕಪ್ ತೊಗರಿಬೇಳೆಯನ್ನು ತೊಳೆದು ಒಂದು ಕುಕ್ಕರ್ ಗೆ ಹಾಕಿ 1 ಕಪ್ ನೀರು, ಚಿಟಿಕೆ ಅರಿಶಿನ, 1 ಟೀ ಸ್ಪೂನ್ ಎಣ್ಣೆ ಹಾಕಿ 3 ವಿಷಲ್ ಕೂಗಿಸಿಕೊಳ್ಳಿ.
ನಂತರ ಬೇಯಿಸಿದ ಬೇಳೆಯನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದನ್ನು ಗ್ಯಾಸ್ ಮೇಲೆ ಇಡಿ. ನಂತರ ಇದಕ್ಕೆ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೊಪ್ಪು ಬೇಯುವವರೆಗೆ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ. ಇದರಲ್ಲಿನ ಹೆಚ್ಚುವರಿ ನೀರನ್ನು ಬೇರೊಂದು ಪಾತ್ರೆಗೆ ಬಸಿದುಕೊಳ್ಳಿ.
ಒಂದು ಬಾಣಲೆಗೆ 2 ಟೀ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ನಂತರ 1 ಈರುಳ್ಳಿ ಕತ್ತರಿಸಿ ಹಾಕಿ ಇದು ಕೆಂಪಗಾದ ನಂತರ 8 ಎಸಳು ಬೆಳ್ಳುಳ್ಳಿ, 4 ಕತ್ತರಿಸಿಕೊಂಡ ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ.
ಇದನ್ನು ಸೊಪ್ಪು, ಬೇಳೆಯ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬಸಿದು ಇಟ್ಟುಕೊಂಡ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ, ಚಪಾತಿ, ಬಿಸಿ ಅನ್ನದ ಜತೆ ತುಂಬಾ ಚೆನ್ನಾಗಿ ಇರುತ್ತದೆ.