ಕರಿಬೇವು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಇದು ಕಣ್ಣಿನ ಆರೊಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಹಾಗೇ ಕೂದಲು ಬೆಳವಣಿಗೆಗೆ ಕೂಡ ಇದು ಸಹಾಯ ಮಾಡುತ್ತದೆ. ಈ ಕರಿಬೇವನ್ನು ಬಳಸಿಕೊಂಡು ಚಟ್ನಿ ಮಾಡುವ ವಿಧಾನ ಇದೆ. ಒಮ್ಮೆ ಮಾಡಿ ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಕರಿಬೇವು, 2 – ಈರುಳ್ಳಿ, ಬೆಳ್ಳುಳ್ಳಿ ಎಸಳು – 20, ಒಣಮೆಣಸು – 3, ಹುಣಸೆಹಣ್ಣು – ನೆಲ್ಲಿಕಾಯಿ ಗಾತ್ರದ್ದು, ಅರಿಶಿನ – 1 ಚಿಟಿಕೆ, ಎಣ್ಣೆ – 1 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಅಗತ್ಯವಿರುವಷ್ಟು.
ಮಾಡುವ ವಿಧಾನ:
ಮೊದಲಿಗೆ ಕರಿಬೇವಿನ ಎಲೆಯನ್ನು ಚೆನ್ನಾಗಿ ತೊಳೆದಿಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿ, ಮೆಣಸು, ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವು, ಅರಿಶಿನ, ಉಪ್ಪು, ಹುಣಸೆಹಣ್ಣು ಸೇರಿಸಿ 5 ನಿಮಿಷಗಳ ಕಾಲ ಹುರಿದು ಗ್ಯಾಸ್ ಆಫ್ ಮಾಡಿ.
ಇದು ತಣ್ಣಗಾದ ಮೇಲೆ ಮಿಕ್ಸಿ ಜಾರಿನಲ್ಲಿ ನಯವಾಗಿ ರುಬ್ಬಿಕೊಳ್ಳಿ. ಬೇಕಿದ್ದರೆ ಸಾಸಿವೆ ಒಗ್ಗರಣೆ ಕೊಡಿ. ಇಡ್ಲಿ ಜತೆ ಸವಿಯಲು ಚೆನ್ನಾಗಿರುತ್ತದೆ ಈ ಚಟ್ನಿ.