ಉಪ್ಪಿಟ್ಟು ಎಂದರೆ ಕೆಲವರಿಗೆ ಇಷ್ಟ. ಇದು ಸುಲಭದಲ್ಲಿ ಆಗುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಬೇಗ ಜೀರ್ಣವಾಗುತ್ತದೆ. ಇಲ್ಲಿ ಗೋಧಿ ರವೆ ಬಳಸಿ ಸುಲಭವಾಗಿ ಮಾಡುವ ಉಪ್ಪಿಟ್ಟು ಇದೆ ಮಾಡಿ ನೋಡಿ.
ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ¼ ಟೀ ಸ್ಪೂನ್ ಸಾಸಿವೆ, ¼ ಟೀ ಸ್ಪೂನ್ ಉದ್ದಿನಬೇಳೆ, ¼ ಟೀ ಸ್ಪೂನ್ ಕಡಲೆಬೇಳೆ ಹಾಕಿ ಅದು ಹೊಂಬಣ್ಣ ಬಂದ ಮೇಲೆ 2 ಈರುಳ್ಳಿ ಕತ್ತರಿಸಿ ಹಾಕಿ. ಇದು ತುಸು ಫ್ರೈ ಆಗುತ್ತಿದ್ದಂತೆ 2 ಹಸಿಮೆಣಸು, ಸಣ್ಣ ತುಂಡು ಶುಂಠಿ ಜಜ್ಜಿ ಹಾಕಿ ನಂತರ ಕರಿಬೇವು ಸ್ವಲ್ಪ ಸೇರಿಸಿ ಫ್ರೈ ಮಾಡಿ.
ಇದಕ್ಕೆ 1 ½ ಕಪ್ ನೀರು ಹಾಕಿ ಕುದಿಸಿ. ನೀರು ಕುದಿ ಬರುವಾಗ ಚಿಟಿಕೆ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ½ ಕಪ್ ರವೆ ಸೇರಿಸಿ. (ಗೋಧಿ ರವೆ ½ ಕಪ್ ತೆಗೆದುಕೊಂಡರೆ 1 ½ ಕಪ್ ನೀರು ತೆಗೆದುಕೊಳ್ಳಬೇಕು.) ಚೆನ್ನಾಗಿ ಬೇಯಿಸಿ. ಇದರ ನೀರು ತುಸು ಆರುತ್ತಾ ಬರುತ್ತಿದ್ದಂತೆ ¼ ಕಪ್ ತೆಂಗಿನಕಾಯಿ ತುರಿ ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ ಮಿಕ್ಸ್ ಮಾಡಿ 1 ವಿಷಲ್ ಕೂಗಿಸಿಕೊಳ್ಳಿ. ಬಿಸಿ ಬಿಸಿ ಇರುವಾಗ ಸರ್ವ್ ಮಾಡಿ.