ಪ್ರತಿ ತಂದೆ-ತಾಯಿ ಮಕ್ಕಳನ್ನು ಸೌಭಾಗ್ಯವೆಂದೇ ಪರಿಗಣಿಸ್ತಾರೆ. ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚಿನ ಗಮನ ನೀಡುವ ಈಗಿನ ದಂಪತಿ ಒಂದೇ ಮಗು ಸಾಕು ಎನ್ನುತ್ತಾರೆ. ಕೆಲ ದಂಪತಿ ಇನ್ನೊಂದಿರಲಿ ಎಂದು ಎರಡನೇ ಮಗು ಮಾಡಿಕೊಳ್ತಾರೆ. ಮಕ್ಕಳನ್ನು ಪಡೆಯುವುದು ವೈಯಕ್ತಿಕ ವಿಚಾರ. ಆದ್ರೆ ಎರಡನೇ ಮಗು ಪಡೆಯುವ ವೇಳೆ ಕೆಲವೊಂದು ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಎರಡನೇ ಮಗು ಹಾಗೂ ಮೊದಲ ಮಗುವಿನ ವಯಸ್ಸಿನ ಅಂತರ ಮಹತ್ವ ಪಡೆಯುತ್ತದೆ. ಕಡಿಮೆ ಅಂತರವಿದ್ರೂ ಕೆಲ ಸಮಸ್ಯೆ ಕಾಡುತ್ತದೆ. ಅಂತರ ಹೆಚ್ಚಾದಲ್ಲಿಯೂ ಕೆಲ ಸಮಸ್ಯೆ ಕಾಡುತ್ತದೆ. ಹಾಗೆ ತಾಯಿ ಆರೋಗ್ಯವನ್ನು ಪರಿಗಣಿಸಿ ಎರಡನೇ ಮಗುವಿಗೆ ಪ್ಲಾನ್ ಮಾಡಬೇಕಾಗುತ್ತದೆ. ತಾಯಿ ಹೆರಿಗೆ ನಂತ್ರ ಸಂಪೂರ್ಣ ಆರೋಗ್ಯವಂತಳಾದ ಮೇಲೆ ಎರಡನೇ ಮಗುವಿಗೆ ಪ್ಲಾನ್ ಮಾಡುವುದು ಒಳ್ಳೆಯದು.
ಮೊದಲ ಹಾಗೂ ಎರಡನೇ ಮಗುವಿನ ಮಧ್ಯೆ 12-18 ತಿಂಗಳ ಅಂತರವಿದ್ದರೆ ಮಕ್ಕಳ ನಡುವೆ ಒಳ್ಳೆ ಬಾಂಧವ್ಯ ಬೆಳೆಯುತ್ತದೆ. ಆದ್ರೆ ತಾಯಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎರಡೂ ಮಕ್ಕಳಿಗೆ ಸ್ತನಪಾನ, ರಾತ್ರಿ ಜಾಗರಣೆ, ಎರಡೂ ಮಕ್ಕಳ ಜವಾಬ್ದಾರಿಯನ್ನು ಒಟ್ಟಿಗೆ ನೋಡಿಕೊಳ್ಳುವುದು ಕಷ್ಟ.
ಅಧ್ಯಯನವೊಂದರ ಪ್ರಕಾರ ಮೊದಲ ಹಾಗೂ ಎರಡನೇ ಮಗುವಿನ ಮಧ್ಯೆ 18 ತಿಂಗಳ ಅಂತರವಿರಲೇಬೇಕು. ಒಂದನೇ ಮಗು 2 ವರ್ಷ ದಾಟಿದ ಮೇಲೆ ಎರಡನೇ ಮಗುವಿನ ಬಗ್ಗೆ ಪ್ಲಾನ್ ಮಾಡುವುದು ಆರೋಗ್ಯಕರ. ಇದು ಮಗು ಹಾಗೂ ತಾಯಿ ಇಬ್ಬರಿಗೂ ಒಳ್ಳೆಯದು.
ಮೂರು ವರ್ಷ ಅಂತರವಿದ್ದರೆ ಮೊದಲ ಮಗುವಿಗೆ ತಿಳುವಳಿಕೆ ಬರಲು ಶುರುವಾಗಿರುತ್ತದೆ. ತಾಯಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ. ಮಕ್ಕಳ ವಯಸ್ಸಿನಲ್ಲಿ ವ್ಯತ್ಯಾಸವಿರುವುದ್ರಿಂದ ತಂದೆ-ತಾಯಿ ಇಬ್ಬರು ಮಕ್ಕಳನ್ನು ಸರಿಯಾಗಿ ಬೆಳೆಸಬಹುದಾಗಿದೆ.
ಮೂರಕ್ಕಿಂತ ಹೆಚ್ಚು ಅಂತರವಾದಲ್ಲಿ ಗರ್ಭಧಾರಣೆ ಹಾಗೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆದಷ್ಟು ಮೂರು ವರ್ಷದ ಅಂತರದಲ್ಲಿ ಎರಡನೇ ಮಗು ಪಡೆಯಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ.