ಬೇಕಾಗುವ ಸಾಮಾಗ್ರಿಗಳು:
ಕೆಸುವಿನ ಎಲೆ-15, 6 ಗಂಟೆ ನೆನೆಸಿದ ಕುಚುಲಕ್ಕಿ/ದೋಸೆ ಅಕ್ಕಿ- 4 ಕಪ್, ಹುಣಸೆಹಣ್ಣು-ಸ್ವಲ್ಪ, ಒಣಮೆಣಸು-4, ಜೀರಿಗೆ- ಅರ್ಧ ಟೀ ಸ್ಪೂನ್, ಧನಿಯಾ- 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು. ಮೆಂತ್ಯ- ¼ ಟೀ ಸ್ಪೂನ್, ಜೀರಿಗೆ- 1 ಟೀ ಸ್ಪೂನ್, ಧನಿಯಾ- 2 ಟೀ ಸ್ಪೂನ್, ಸ್ವಲ್ಪ ಇಂಗು, 7 ರಿಂದ 8 ಒಣಮೆಣಸಿನಕಾಯಿ, ಸ್ವಲ್ಪ ಹುಣಸೆಹಣ್ಣು, ಅರಶಿನ ¼ ಟೀ ಸ್ಪೂನ್, 1 ಕಪ್ ತೆಂಗಿನ ತುರಿ, ಬೆಲ್ಲ ಸ್ವಲ್ಪ. ಒಗ್ಗರಣೆಗೆ ಬೆಳ್ಳುಳ್ಳಿ- 2 ಎಸಳು, ಸಾಸಿವೆ, ಕರಿಬೇವು ಸೊಪ್ಪು.
ಮಾಡುವ ವಿಧಾನ:
6 ಗಂಟೆ ನೆನೆಸಿದ ಕುಚುಲಕ್ಕಿ/ದೋಸೆ ಅಕ್ಕಿ- 4 ಕಪ್, ಹುಣಸೆಹಣ್ಣು, ಒಣಮೆಣಸು-4, ಜೀರಿಗೆ- ಅರ್ಧ ಟೀ ಸ್ಪೂನ್, ಧನಿಯಾ- 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಕೆಸುವಿನ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ರುಬ್ಬಿರುವಂತಹ ಮಿಶ್ರಣಕ್ಕೆ ಸಣ್ಣಗೆ ಕಟ್ ಮಾಡಿರುವ ಕೆಸುವಿನ ಎಲೆಯನ್ನು ಹಾಕಿ ಮಿಕ್ಸ್ ಮಾಡಬೇಕು.
ಬಳಿಕ ರುಬ್ಬಿರುವಂತಹ ಮಿಶ್ರಣವನ್ನು ಕಡುಬಿನ ರೀತಿಯಲ್ಲಿ ದೊಡ್ಡ ಉಂಡೆಗಳನ್ನಾಗಿ ಮಾಡಬೇಕು. ನಂತರ ಇಡ್ಲಿ ಪಾತ್ರೆಯಲ್ಲಿ ಇಡ್ಲಿ ಬೇಯಿಸುವ ರೀತಿಯಲ್ಲಿ ಬೇಯಿಸಬೇಕು. ಅರ್ಧ ಗಂಟೆಗಳ ಕಾಲ ಬೇಯಿಸಬೇಕು. ಆರಿದ ನಂತರ ಈ ತಿಂಡಿಯನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು.
ಇನ್ನು ಮಸಾಲೆ ಸಿದ್ಧತೆ ಮಾಡಿಕೊಳ್ಳೋಣ. ¼ ಟೀ ಸ್ಪೂನ್ ಮೆಂತ್ಯ, 1 ಟೀ ಸ್ಪೂನ್ ಜೀರಿಗೆ, 2 ಟೀ ಸ್ಪೂನ್ ಧನಿಯಾ, ಸ್ವಲ್ಪ ಇಂಗು, 7 ರಿಂದ 8 ಒಣಮೆಣಸಿನಕಾಯಿ ಹಾಕಿ ಫ್ರೈ ಮಾಡಬೇಕು. ಸ್ವಲ್ಪ ಹುಣಸೆಹಣ್ಣು, ಸ್ವಲ್ಪ ಅರಶಿನ, 1 ಕಪ್ ತೆಂಗಿನ ತುರಿ, ಇವೆಲ್ಲವನ್ನೂ ರುಬ್ಬಬೇಕು. ಬಾಣಲೆಗೆ ಒಗ್ಗರಣೆ ಹಾಕಿ, ರುಬ್ಬಿರುವ ಮಿಶ್ರಣವನ್ನು ಹಾಕಿ ಕುದಿ ಬರುವ ತನಕ ಬೇಯಿಸಿ. ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ ಹಾಕಬೇಕು. ಚೆನ್ನಾಗಿ ಕುದಿ ಬಂದ ನಂತರ ಕಟ್ ಮಾಡಿರುವ ಪತ್ರೊಡೆಯನ್ನು ಹಾಕಿ ನಿಧಾನಕ್ಕೆ ಮಿಕ್ಸ್ ಮಾಡಿದರೆ ಸವಿಯಲು ಪತ್ರೊಡೆ ಸಿದ್ಧ.