ಹೊರಗಡೆ ಮಳೆ ಒಳಗೆ ಒಂದು ರೀತಿ ಚಳಿ ಇರುವಾಗ ಸಂಜೆ ಹೊತ್ತಿಗೆ ಬಿಸಿ ಬಿಸಿ ಸೂಪ್ ಕುಡಿಯುವ ಮಜಾನೇ ಬೇರೆ.
ಇಲ್ಲಿ ರುಚಿಕರವಾದ ಸೋರೆಕಾಯಿ ಸೂಪ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 – ಸೋರೆಕಾಯಿ, 2 – ಈರುಳ್ಳಿ, 5 ಎಸಳು – ಬೆಳ್ಳುಳ್ಳಿ, ½ ಟೀ ಸ್ಪೂನ್ – ಕಾಳುಮೆಣಸಿನ ಪುಡಿ, 4 ಟೇಬಲ್ ಸ್ಪೂನ್ – ಕ್ರೀಮ್ ಚೀಸ್, 3 ಟೇಬಲ್ ಸ್ಪೂನ್ – ಬೆಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಸೋರೆಕಾಯಿ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಒಂದು ಪ್ಯಾನ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಬೆಳ್ಳುಳ್ಳಿ ಹಾಕಿ, ಸೋರೆಕಾಯಿ ಹೋಳುಗಳು ಮುಳುಗುವಷ್ಟು ನೀರು ಹಾಕಿ ಮುಚ್ಚಳ ಮುಚ್ಚಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಟ್ಟು ಬಿಡಿ. ಒಂದು ಮಿಕ್ಸಿ ಜಾರಿಗೆ ಸೋರೆಕಾಯಿ ಹೋಳು ಹಾಗು ಬೆಳ್ಳುಳ್ಳಿ, ಈರುಳ್ಳಿಯನ್ನು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ. ಬೇಯಿಸಿಕೊಂಡ ನೀರನ್ನು ಬಿಸಾಡಬೇಡಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ನಂತರ ರುಬ್ಬಿಕೊಂಡ ಮಿಶ್ರಣ ಸೇರಿಸಿ ಇದಕ್ಕೆ ಕಾಳುಮೆಣಸಿನ ಪುಡಿ, ಉಪ್ಪು ಹಾಕಿ. ನಂತರ ಬೇಯಿಸಿಕೊಂಡ ನೀರು (ನಿಮಗೆ ಎಷ್ಟು ತೆಳುವಾಗಿಯೋ ಬೇಕೋ ಅಷ್ಟು ನೀರು) ಸೇರಿಸಿಕೊಂಡು 6 ನಿಮಿಷಗಳ ಕಾಲ ಕುದಿಸಿ. ನಂತರ ಕ್ರೀಂ ಚೀಸ್ ಹಾಕಿ ಗ್ಯಾಸ್ ಆಪ್ ಮಾಡಿ. ರುಚಿಕರವಾದ ಸೂಪ್ ಅನ್ನು ಬಿಸಿ ಇರುವಾಗಲೇ ಸೇವಿಸಿ.