ಇಡ್ಲಿ, ದೋಸೆ ಮಾಡಿದಾಗ ದಿನಾ ಒಂದೇ ರೀತಿಯಾದ ಚಟ್ನಿ, ಸಾಂಬಾರು ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಶುಂಠಿ ಚಟ್ನಿ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು:
2 ಟೇಬಲ್ ಸ್ಪೂನ್ – ಕಡಲೆಬೇಳೆ, 1 ಟೇಬಲ್ ಸ್ಪೂನ್ – ಉದ್ದಿನಬೇಳೆ, 1 ½ ಇಂಚು ಶುಂಠಿ, 1/3 ಟೀ ಸ್ಪೂನ್ – ಉಪ್ಪು, 3 – ಒಣಮೆಣಸು, 1 ಟೇಬಲ್ ಸ್ಪೂನ್ – ಹುಣಸೆಹಣ್ಣಿನ ರಸ, 1 ಟೇಬಲ್ ಸ್ಪೂನ್ – ಬೆಲ್ಲ, 1/2 ಟೀ ಸ್ಪೂನ್ – ಜೀರಿಗೆ, 1 – ಈರುಳ್ಳಿ, 1 ಟೇಬಲ್ ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಶುಂಠಿಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ, ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ, ಶುಂಠಿ, ಜೀರಿಗೆ ಸೇರಿಸಿ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ.
ಈ ಮಿಶ್ರಣ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಬೆಲ್ಲ, ಹುಣಸೆಹಣ್ಣಿನ ರಸ, ಸ್ವಲ್ಪ ನೀರು, ಉಪ್ಪು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ನೀರು ಬೇಕಿದ್ದರೆ ಸೇರಿಸಿಕೊಳ್ಳಿ.
ನಂತರ ಇದನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ, ಕರಿಬೇವು, ಚಿಟಿಕೆ ಇಂಗು ಸೇರಿಸಿ ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ. ಇದು ಬಿಸಿ ಅನ್ನದ ಜತೆ ಹಾಗೂ ದೋಸೆ, ಇಡ್ಲಿ ಜತೆ ಸವಿಯಲು ಚೆನ್ನಾಗಿರುತ್ತದೆ.