
ಆರೋಗ್ಯಕರ ತಿನಿಸು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ರಾಗಿ ಹಾಗೂ ನುಗ್ಗೆಸೊಪ್ಪನ್ನು ಬಳಸಿಕೊಂಡು ಮಾಡುವ ರುಚಿಕರವಾದ ರೊಟ್ಟಿ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು – 1 ½ ಕಪ್, ನುಗ್ಗೆಸೊಪ್ಪು- 1 ½ ಕಪ್, ದೊಡ್ಡ ಈರುಳ್ಳಿ-1/4 ಕಪ್ ಚಿಕ್ಕದ್ದಾಗಿ ಕತ್ತರಿಸಿದ್ದು, ತೆಂಗಿನತುರಿ-1 ಟೇಬಲ್ ಸ್ಪೂನ್, ಎಣ್ಣೆ-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು, ನೀರು-ಅಗತ್ಯವಿರುವಷ್ಟು.
ಮಾಡುವ ವಿಧಾನ:
ನುಗ್ಗೆಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ನಂತರ ನುಗ್ಗೆಸೊಪ್ಪು ಸೇರಿಸಿ. ಇದು ಹಸಿವಾಸನೆ ಹೋದಾಗ ಗ್ಯಾಸ್ ಆಫ್ ಮಾಡಿ.
ನಂತರ ರಾಗಿ ಹಿಟ್ಟನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ನುಗ್ಗೆ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ. ಬಿಸಿ ನೀರನ್ನು ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿ ಕಲಸಿಕೊಳ್ಳಿ. ಇದರಿಂದ ಉಂಡೆ ಕಟ್ಟಿಕೊಂಡು ಇಡಿ.
ನಂತರ ಒಂದು ಬಟರ್ ಪೇಪರ್ ಗೆ ಸ್ವಲ್ಪ ಎಣ್ಣೆ ಸವರಿಕೊಂಡು ಈ ಉಂಡೆ ಇಟ್ಟು ನಿಧಾನಕ್ಕೆ ತಟ್ಟಿ. ಅಕ್ಕಿ ರೊಟ್ಟಿ ರೀತಿ ಇರಲಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ತುಸು ಎಣ್ಣೆ ಸವರಿ ತಟ್ಟಿದ ಈ ರೊಟ್ಟಿ ಹಾಕಿ ಎರಡೂ ಕಡೆ ಚೆನ್ನಾಗಿ ಕಾಯಿಸಿ. ಬೆಣ್ಣೆ ಅಥವಾ ಕಾಯಿ ಚಟ್ನಿ ಜತೆ ಇದು ತುಂಬಾ ಚೆನ್ನಾಗಿರುತ್ತದೆ.