ಕೆಲವರಿಗೆ ಏನೇ ತಿಂಡಿ ಮಾಡಿದ್ರೂ ಇಡ್ಲಿ ತಿಂದರೆ ಮಾತ್ರ ಸಮಾಧಾನ. ದಿನಾ ಒಂದೇ ರೀತಿ ಇಡ್ಲಿ ತಿಂದು ಬೇಜಾರಾಗಿದ್ರೆ ಒಮ್ಮೆ ಈ ರಾಗಿ ಇಡ್ಲಿ ಮಾಡಿಕೊಂಡು ತಿನ್ನಿ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
½ ಕಪ್ – ಉದ್ದಿನಬೇಳೆ, 1 ½ ಕಪ್ – ರಾಗಿ, 1 ಟೀ ಸ್ಪೂನ್ – ಮೆಂತೆಕಾಳು.
ಮಾಡುವ ವಿಧಾನ:
ಉದ್ದಿನಬೇಳೆ ಹಾಗೂ ಮೆಂತೆಕಾಳುಗಳನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಹಾಕಿ. ಹಾಗೇ ರಾಗಿಯನ್ನು ತೊಳೆದು 5 ಗಂಟೆಗಳ ಕಾಲ ನೆನೆ ಹಾಕಿ. ಬ್ಲೆಂಡರ್ ಜಾರಿಗೆ ಉದ್ದಿನಬೇಳೆ, ಮೆಂತೆ ಹಾಕಿ ರುಬ್ಬಿಕೊಂಡು ಇದನ್ನು ಒಂದು ಅಗಲವಾದ ಪಾತ್ರೆಗೆ ತೆಗೆದುಕೊಳ್ಳಿ.
ನಂತರ ರಾಗಿ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಉದ್ದಿನ ಮಿಶ್ರಣಕ್ಕೆ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದನ್ನು ಹುದುಗು ಬರುವುದಕ್ಕೆ ರಾತ್ರಿಯಿಡೀ ಇಟ್ಟುಬಿಡಿ. ಬೆಳಿಗ್ಗೆ ಇದಕ್ಕೆ ಉಪ್ಪು ಸೇರಿಸಿಕೊಂಡು ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸಿಕೊಳ್ಳಿ. ಚಟ್ನಿ ಅಥವಾ ಸಾಂಬಾರು ಜತೆ ಚೆನ್ನಾಗಿರುತ್ತದೆ.