ಆರೋಗ್ಯಕರ ಬಾಳೆ ಹೂವಿನ ಪಲ್ಯ ಮಾಡುವುದು ತುಂಬಾ ಸುಲಭ, ಮಾಡುವ ವಿಧಾನ ಹೀಗಿದೆ ನೊಡಿ. ಮೊದಲಿಗೆ ಬಾಳೆ ಹೂವನ್ನು ಚೆನ್ನಾಗಿ ಬಿಡಿಸಿಕೊಂಡು ಅದರೊಳಗೆ ಇರುವ ನಾರನ್ನು ತೆಗೆದುಕೊಂಡು ಬಾಳೆ ಹೂವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಹೀಗೆ ಕತ್ತರಿಸಿದ ಬಾಳೆ ಹೂವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರು, 4 ಚಮಚ ಮೊಸರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಮಾಡುವುದರಿಂದ ಬಾಳೆಹೂವು ಕಪ್ಪಾಗುವುದಿಲ್ಲ. ನಂತರ ಒಂದು ಪಾತ್ರೆಯಲ್ಲಿ ¼ ಕಪ್ ತೊಗರಿಬೇಳೆ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ.
ತೊಗರಿಬೇಳೆ ಹದವಾಗಿ ಬೆಂದರೆ ಸಾಕು. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಇಡಿ ಸ್ವಲ್ಪ ಉಪ್ಪು ಅರಿಸಿನ ಸೇರಿಸಿ ನಂತರ ಕತ್ತರಿಸಿಟ್ಟ ಬಾಳೆಹೂವು ಹಾಕಿ ಬೇಯಲು ಇಡಿ. ಇದು ಬೆಂದ ನಂತರ ನೀರನ್ನು ಶೋಧಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ¼ ಟೀ ಸ್ಪೂನ್ ಸಾಸಿವೆ, ¼ ಟೀ ಸ್ಪೂನ್ ಉದ್ದಿನಬೇಳೆ, 2 ಒಣಮೆಣಸು ತುಂಡು ಮಾಡಿ ಹಾಕಿ, ನಂತರ 1 ಈರುಳ್ಳಿ ಕತ್ತರಿಸಿ ಹಾಕಿ ಅದು ಕೆಂಪಾಗುತ್ತಲೆ ಕರಿಬೇವು ಸೇರಿಸಿ ನಂತರ ಬೇಯಿಸಿಟ್ಟುಕೊಂಡ ಬಾಳೆಹೂವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಕಾಯಿತುರಿ, ಬೇಯಿಸಿದ ತೊಗರಿಬೇಳೆ ಹಾಕಿ ಚೆನ್ನಾಗಿ ಮಿಕ್ಸ್. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಬಾಳೆ ಹೂವಿನ ಪಲ್ಯ ಸಿದ್ಧ.