ಮಕ್ಕಳಿಗೆ ಚಿಕ್ಕಿ ಅಂದರೆ ತುಂಬಾ ಇಷ್ಟ. ದೊಡ್ಡವರು ಕೂಡ ಇದನ್ನು ಖುಷಿಯಿಂದ ತಿನ್ನುತ್ತಾರೆ. ಚಳಿಗಾಲದಲ್ಲಿ ಇದು ದೇಹಕ್ಕೆ ತುಂಬಾ ಒಳ್ಳೆಯದು.
ಮಕ್ಕಳು ಸ್ಕೂಲಿನಿಂದ ಬಂದಾಗ ಬೇಕರಿ ತಿಂಡಿ ತಿನಿಸುಗಳನ್ನು ಕೊಡುವ ಬದಲು ಇದನ್ನು ಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ. ಗುಲಾಬ್ ಬಾದಾಮ್ ಚಿಕ್ಕಿ ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಬೇಕಾಗುವ ಸಾಮಾಗ್ರಿ: 2 ದೊಡ್ಡ ಚಮಚ-ಬೆಣ್ಣೆ, 1 ಕಪ್ –ಸಕ್ಕರೆ, ಚಿಟಿಕೆ ಉಪ್ಪು, ½ ಕಪ್ ಚಿಕ್ಕದ್ದಾಗಿ ಕತ್ತರಿಸಿಕೊಂಡ ಬಾದಾಮಿ, 1 ಕಪ್ –ಒಣಗಿಸಿದ ಗುಲಾಬಿ ಎಸಳು.
ಮಾಡುವ ವಿಧಾನ: ದಪ್ಪತಳದ ಪಾತ್ರೆಯೊಂದನ್ನು ತೆಗೆದುಕೊಳ್ಳಿ. ಅದಕ್ಕೆ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ , ಚಿಟಿಕೆ ಉಪ್ಪನ್ನು ಸೇರಿಸಿ. ಸಕ್ಕರೆ ಕರಗುವವರೆಗೆ ಚೆನ್ನಾಗಿ ತಿರುಗಿಸುತ್ತಾ ಇರಿ. ತಳ ಹತ್ತದಂತೆ ಜಾಗೃತೆ ವಹಿಸಿರಿ. ಸಕ್ಕರೆ ಬಣ್ಣ ತಿಳಿ ಕಂದು ಬರುವವರಗೆ ಚೆನ್ನಾಗಿ ತಿರುಗಿಸಿ. ನಂತರ ಗ್ಯಾಸ್ ಆಫ್ ಮಾಡಿ. ಜಾಸ್ತಿ ಕಂದು ಬಣ್ಣ ಬರುವ ಅಗತ್ಯವಿಲ್ಲ. ನಂತರ ಇದಕ್ಕೆ ಬಾದಾಮಿ ಹಾಗೂ ಒಣಗಿದ ಗುಲಾಬಿ ಎಸಳು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ತುಪ್ಪ ಸವರಿದ ತಟ್ಟೆಗೆ ಇದನ್ನು ಹಾಕಿ ಸೆಟ್ ಮಾಡಿಕೊಳ್ಳಿ. ಬಿಸಿ ಸ್ವಲ್ಪ ತಣ್ಣಗಾದ ನಂತರ ನಿಮಗೆ ಬೇಕಾದ ಶೇಪ್ ಗೆ ಕತ್ತರಿಸಿಕೊಳ್ಳಿ.