ಈಗ ಎಲ್ಲರೂ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೈದಾ, ಹಾಗೂ ಸಕ್ಕರೆ ಎಂದರೆ ಮಾರುದ್ದ ದೂರ ಹೋಗುತ್ತಾರೆ.
ಮಕ್ಕಳಿಗಂತೂ ಸಕ್ಕರೆ, ಮೈದಾ ಎರಡೂ ಒಳ್ಳೆಯದಲ್ಲ. ಹಾಗಾಗಿ ತಿಂಡಿಗಾಗಿ ಪೀಡಿಸುವ ಮಕ್ಕಳಿಗೆ ಇಲ್ಲಿ ಗೋಧಿ ಹಿಟ್ಟು ಹಾಗೂ ಬೆಲ್ಲ ಬಳಸಿ ರುಚಿಕರವಾದ ಕುಕ್ಕೀಸ್ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – 1.5 ಕಪ್, ಬೇಕಿಂಗ್ ಪೌಡರ್ – 1/2 ಟೀ ಸ್ಪೂನ್, ತುಪ್ಪ – 1/2 ಕಪ್, ಬೆಲ್ಲದ ಪುಡಿ – 1/2 ಕಪ್. ಚಕ್ಕೆ ಪುಡಿ – 1/2 ಟೀ ಸ್ಪೂನ್, ಕಾಯಿಸಿದ ಹಾಲು – 3 ಟೇಬಲ್ ಸ್ಪೂನ್, ಉಪ್ಪು – ಚಿಟಿಕೆ.
ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಗೆ ಗೋಧಿ ಹಿಟ್ಟು, ಚಿಟಿಕೆ ಉಪ್ಪು, ಬೇಕಿಂಗ್ ಪೌಡರ್, ಚಕ್ಕೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದು ಬೌಲ್ ಗೆ ಬೆಲ್ಲದ ಪುಡಿ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಹಾಲು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ. ಹಾಗೇ ಇದಕ್ಕೆ ಗೋಧಿಹಿಟ್ಟು ಸೇರಿಸಿ ಚೆನ್ನಾಗಿ ನಾದಿಕೊಂಡು ಒಂದು ಮುಚ್ಚಳ ಮುಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಿಡಿ.
ನಂತರ ಮತ್ತೊಮ್ಮೆ ಈ ಹಿಟ್ಟನ್ನು ನಾದಿಕೊಂಡು ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ. ಕಟ್ಟರ್ ಅಥವಾ ಒಂದು ಬೌಲ್ ನ ಸಹಾಯದಿಂದ ಇದನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ. ನಂತರ ಬೇಕಿಂಗ್ ಟ್ರೇ ಮೇಲೆ ಬಟರ್ ಪೇಪರ್ ಹಾಕಿ ಅದರ ಮೇಲೆ ಈ ಕುಕ್ಕೀಸ್ ಇಟ್ಟು ಪ್ರೀ ಹೀಟ್ ಮಾಡಿದ ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ.