ರಾಜ್ಯದಲ್ಲಿ ಈ ಬಾರಿ ಮುಂಗಾರು ಪ್ರವೇಶಿಸಿ ತಿಂಗಳುಗಳ ಕಳೆದಿದ್ದರು ಸಹ ವ್ಯಾಪಕವಾಗಿ ಮಳೆಯಾಗಿರಲಿಲ್ಲ. ಆದರೆ ಇದೀಗ ರಾಜ್ಯದಾದ್ಯಂತ ಅರಿದ್ರಾ ಮಳೆ ಆರ್ಭಟಿಸುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದರ ಜೊತೆಗೆ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿದೆ.
ಅಲ್ಲದೆ ಈ ಮಳೆಗೆ ಜೋಗ ಜಲಪಾತದ ವೈಭವವೂ ಮರುಕಳಿಸಿದ್ದು, ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಕೆಲ ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ರೈತ ಸಮುದಾಯವೂ ಸಂತಸಗೊಂಡಿದ್ದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದೆ.
ಭದ್ರಾ ಜಲಾಶಯದ ನದಿ ಪಾತ್ರದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯದ ಒಳಹರಿವು ಹೆಚ್ಚಳಗೊಂಡಿದ್ದು, ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಜುಲೈ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ 3 ಅಡಿಯಷ್ಟು ಹೆಚ್ಚಳವಾಗಿದೆ.
ಜುಲೈ 15 ರಿಂದ ಭದ್ರಾ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಅಷ್ಟರೊಳಗೆ ಜಲಾಶಯದ ನೀರಿನ ಮಟ್ಟ 165 ಅಡಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿಗಳಾಗಿದ್ದು, ಸೋಮವಾರದ ವೇಳೆಗೆ 155.7 ಅಡಿಗೆ ತಲುಪಿದೆ.