ಎರಡು ವರ್ಷಗಳ ಕೋವಿಡ್ ಕುಸಿತದ ನಂತರ, ದೇಶದಲ್ಲಿ ಆಭರಣ ಮಾರುಕಟ್ಟೆಯು ಅಕ್ಷಯ ತೃತೀಯದ ಸಂದರ್ಭದಲ್ಲಿ ಭರ್ಜರಿ ಶುಭಾರಂಭವನ್ನು ಪಡೆದಿದೆ.
ಅಕ್ಷಯ ತೃತೀಯ ದಿನದಂದು 15,000 ಕೋಟಿ ರೂ. ಮೌಲ್ಯದ ಆಭರಣ ವ್ಯವಹಾರ ದಾಖಲಾಗಿದೆ. ಇದು ಕೋವಿಡ್-ಪ್ರೇರಿತ ಲಾಕ್‌ಡೌನ್ ನಂತರದ ಅತಿದೊಡ್ಡ ಆಭರಣ ವ್ಯವಹಾರವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿ ಭಾರಿ ಕುಸಿತವನ್ನು ಕಂಡ ನಂತರ, ದೇಶಾದ್ಯಂತದ ಆಭರಣ ಮಳಿಗೆಗಳು ಜನರಿಂದ ತುಂಬಿತ್ತು. ಅಕ್ಷಯ ತೃತೀಯ ದಿನದಂದು 15,000 ಕೋಟಿ ರೂಪಾಯಿ ಮೌಲ್ಯದ ಆಭರಣ ವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ. ಇದು ಆಭರಣ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ತರಿಸಿದೆ.
ಅಕ್ಷಯ ತೃತೀಯದಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ, ಆಭರಣ ವ್ಯಾಪಾರಿಗಳು ಹಗುರವಾದ ಆಭರಣಗಳನ್ನು ತಯಾರಿಸಿದ್ರು. ಇದು ಉತ್ತಮ ಮಾರಾಟ ಮತ್ತು ಬೇಡಿಕೆಯನ್ನು ಹೊಂದಿದೆ ಎಂದು ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮತ್ತು ಪಂಕಜ್ ಅರೋರಾ ತಿಳಿಸಿದ್ದಾರೆ. ಎರಡು ವರ್ಷಗಳ ಸುದೀರ್ಘ ಅಂತರದ ನಂತರ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಗೆ ಭಾರಿ ಬೇಡಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ, ದೇಶದಾದ್ಯಂತ ಚಿನ್ನದ ಅಂಗಡಿಗಳು ಅಕ್ಷಯ ತೃತೀಯದಂದು ಯಾವುದೇ ಮಹತ್ವದ ವ್ಯಾಪಾರವನ್ನು ಮಾಡಲು ಸಾಧ್ಯವಾಗಿರಲಿಲ್ಲ. ಅಕ್ಷಯ ತೃತೀಯವನ್ನು ಭಾರತದಲ್ಲಿ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ದಿನವು ಚಿನ್ನ ಮತ್ತು ಬೆಳ್ಳಿ ವ್ಯವಹಾರಗಳಿಗೆ ಫಲಪ್ರದವಾಗಿದೆ.