ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಇದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50600 ರೂಪಾಯಿಗೆ ಬಂದಿಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತವೇ ಚಿನ್ನ ಮತ್ತು ಬೆಳ್ಳಿ ಅಗ್ಗವಾಗಲು ಕಾರಣ.
ಬುಧವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 134 ರೂಪಾಯಿಗಳಷ್ಟು ಇಳಿಕೆ ಕಂಡಿದ್ದು, 50,601 ರೂಪಾಯಿಗಳಿಗೆ ತಲುಪಿದೆ. ಈ ಮೊದಲು ಬಂಗಾರದ ದರ 10 ಗ್ರಾಂಗೆ 50,735 ರೂಪಾಯಿ ಇತ್ತು. ಬೆಳ್ಳಿ ಬೆಲೆ ಕೂಡ 169 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 62,787 ರೂಪಾಯಿ ಆಗಿದೆ. ಈ ಮೊದಲು ಬೆಳ್ಳಿ ಪ್ರತಿ ಕೆಜಿಗೆ 62,956 ರೂಪಾಯಿ ಇತ್ತು.
ರೂಪಾಯಿ ಮೌಲ್ಯ ಕೂಡ ಚೇತರಿಕೆ ಕಂಡಿದ್ದು, ಯುಎಸ್ ಡಾಲರ್ ವಿರುದ್ಧ 76 ರೂಪಾಯಿ 40 ಪೈಸೆಗೆ ಬಂದು ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಪ್ರತಿ ಔನ್ಸ್‌ಗೆ 1,869 ಡಾಲರ್‌ನಷ್ಟಾಗಿದೆ. ಬೆಳ್ಳಿ ಔನ್ಸ್‌ಗೆ 22.61 ಡಾಲರ್ ಆಗಿದೆ. ಯುಎಸ್ ಖಜಾನೆ ಗಳಿಕೆಯ ಬೆಳವಣಿಗೆ ಮತ್ತು ಫೆಡರಲ್ ರಿಸರ್ವ್‌ನ ನೀತಿ ನಿರ್ಧಾರಕ್ಕೂ ಮುನ್ನವೇ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿತ್ತು, ಹಾಗಾಗಿಯೇ ಈ ಸ್ಥಿರತೆ ಇದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ‘ಬಿಐಎಸ್ ಕೇರ್ ಆ್ಯಪ್’ ಮೂಲಕ ಚಿನ್ನದ ಶುದ್ಧತೆ ನಿಜವೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು.