ಈಗಾಗಲೇ ಚಿನ್ನದ ಬೆಲೆ ಗಗನಕ್ಕೇರಿದ್ದು, ಇದೀಗ ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ಯುದ್ಧ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 1,202 ರಷ್ಟು ಏರಿಕೆಯಾಗುವ ಮೂಲಕ ಈಗ ಇದರ ಬೆಲೆ 51,889 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ 2,148 ರೂಪಾಯಿಗಳ ಏರಿಕೆಯಾಗಿದ್ದು, ಈಗ ಕೆಜಿ ಬೆಳ್ಳಿ ಬೆಲೆ 67,956 ರೂಪಾಯಿ ತಲುಪಿದೆ.
ಹಬ್ಬ ಹರಿದಿನಗಳಲ್ಲಿ, ಶುಭ ಸಂದರ್ಭಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ಭಾರತೀಯರಿಗೆ ಇದರಿಂದ ತೀವ್ರ ನಿರಾಸೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂಬ ಸುದ್ದಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಚಿನ್ನದ ಬೆಲೆ ಗಗನಕ್ಕೇರಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಹಾಗೂ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯೂ ಕಾರಣವೆನ್ನಲಾಗಿದೆ.
ರಷ್ಯಾ – ಉಕ್ರೇನ್ ನಡುವಿನ ಸಂಘರ್ಷ ತೈಲ ಬೆಲೆಗಳ ಮೇಲೂ ಪರಿಣಾಮ ಬೀರಲಿದ್ದು, ಪಂಚರಾಜ್ಯಗಳ ಚುನಾವಣೆ ಮುಗಿದ ಬಳಿಕ ಅಂದರೆ ಮುಂದಿನ ವಾರದ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ ಒಂಬತ್ತು ರೂಪಾಯಿಗಳಷ್ಟು ಏರಿಕೆಯಾಗಿ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದೊಮ್ಮೆ ತೈಲ ಬೆಲೆ ಏರಿಕೆಯಾದರೆ ಇದರ ಪರಿಣಾಮ ದೈನಂದಿನ ಬಳಕೆ ವಸ್ತುಗಳ ಮೇಲೂ ಆಗಲಿದೆ. ಶ್ರೀಸಾಮಾನ್ಯರ ಜೀವನ ಬಲು ದುಬಾರಿಯಾಗಿ ಪರಿಣಮಿಸಲಿದೆ.