ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಸಮರ ಇತರ ದೇಶಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಇನ್ನು ಕೆಲ ದಿನಗಳ ಕಾಲ ಯುದ್ಧ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎನ್ನಲಾಗುತ್ತಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅವ್ಯಾಹತವಾಗಿ ಏರುತ್ತಲೇ ಇವೆ. ರಷ್ಯಾ-ಉಕ್ರೇನ್ ಸಂಘರ್ಷದಿಂದ ಅಧಿಕ ಹಣದುಬ್ಬರ, ಕಚ್ಚಾ ತೈಲದ ಬೆಲೆ ಹೆಚ್ಚಳ, ಕುಂಠಿತ ಬೆಳವಣಿಗೆ, ಆರ್ಥಿಕತೆ ಮೇಲೂ ಪರಿಣಾಮವಾಗಿದೆ. ಹೀಗಿರುವಾಗ ಹಳದಿ ಲೋಹದ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಬೆಲೆ ಏರಿಕೆ ಮುಂದುವರೆದಿದೆ.
ಬಹು ಸರಕು ವಿನಿಮಯದಲ್ಲಿ(MCX) ಚಿನ್ನದ ಭವಿಷ್ಯದ ಬೆಲೆಗಳು 2.17% ಅಥವಾ 10 ಗ್ರಾಂಗೆ 1,141 ರೂ. ರಷ್ಟು ಹೆಚ್ಚಳವಾಯಿತು. ಈ ಮೂಲಕ ಇಂದಿನ ಬೆಲೆ 53,700 ರೂ. ಎಂದು ಅಂದಾಜಿಸಲಾಗಿತ್ತು. 717 ರೂ. ಅಂತರದೊಂದಿಗೆ ಶುರುವಾದ ಚಿನ್ನದ ಬೆಲೆ, ಮಧ್ಯಾಹ್ನ 1:31ರ ವೇಳೆಗೆ 53,797 ರೂ. ತಲುಪಿತು. ಇದು ಇಂದು ದಾಖಲಾಗಿರುವ ದಿನದ ಗರಿಷ್ಠ ಮಟ್ಟ.
ಇಂದು ಭಾರತದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಒಂದು ಸಾವಿರದ ಏರಿಕೆ ಕಂಡುಬಂದಿದೆ. ಚೆನ್ನೈನಲ್ಲಿ 24-ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 55,145 ರೂ. ಇದೆ. ದೆಹಲಿಯಲ್ಲಿ, ಚಿನ್ನದ ಬೆಲೆಯಲ್ಲಿ ಇಂದು 1000 ರೂ. ಏರಿಕೆಯಾಗಿ 53,890 ಕ್ಕೆ ತಲುಪಿದೆ. ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಇತರ ಹಲವಾರು ನಗರಗಳಲ್ಲಿ ಇದೇ ಮಟ್ಟದ ಏರಿಕೆ ಕಂಡುಬಂದಿದೆ.