ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ದಾಖಲೆಯ ಏರಿಕೆ ಕಂಡಿವೆ. ಅಮೆರಿಕದಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟಿನಿಂದಾಗಿ ಸರಕುಗಳ ಬೆಲೆಗಳು ಹೆಚ್ಚುತ್ತಿದ್ದು, ಹಳದಿ ಲೋಹ ದುಬಾರಿಯಾಗಲು ಇದೇ ಕಾರಣವೆಂದು ವ್ಯಾಪಾರಿಗಳು ಮತ್ತು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸುರಕ್ಷಿತ ಹೂಡಿಕೆಗಾಗಿ ಜನರು ಬಂಗಾರ ಖರೀದಿಗೆ ಮುಗಿಬಿದ್ದಿದ್ದು, ಬೆಲೆ ಏರಿಕೆ ಕಾಣುತ್ತಲೇ ಇದೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರಿಂದ ಬಲವಾದ ಬೇಡಿಕೆ ವ್ಯಕ್ತವಾಗಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 976 ರೂಪಾಯಿ ಏರಿಕೆಯೊಂದಿಗೆ 60,359 ರೂಪಾಯಿಗೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಶೇ.1.64 ರಷ್ಟು ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲೂ ಬಂಗಾರ ದುಬಾರಿಯಾಗಿದೆ. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,020.70 ಡಾಲರ್‌ಗೆ ತಲುಪಿದ್ದು, ಶೇ.1.53 ರಷ್ಟು ಹೆಚ್ಚಾಗಿದೆ.
ಅಮೆರಿಕದಲ್ಲಿನ ಎರಡು ಪ್ರಾದೇಶಿಕ ಬ್ಯಾಂಕ್‌ಗಳ ಹಠಾತ್ ವೈಫಲ್ಯದ ಜೊತೆಗೆ ಯುರೋಪಿಯನ್ ಬ್ಯಾಂಕ್‌ನಲ್ಲಿನ ಪ್ರಕ್ಷುಬ್ಧತೆ ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕ್‌ಗಳ ವೈಫಲ್ಯ ಆರ್ಥಿಕ ವಲಯಕ್ಕೂ ಹೊಡೆತ ಕೊಡುವ ಸಾಧ್ಯತೆಗಳಿದ್ದು, ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮತ್ತಷ್ಟು ದುರ್ಬಲವಾಗಬಹುದು.
ಆದಾಗ್ಯೂ ಭಾರತದ ಸಾಕಷ್ಟು ವಿದೇಶಿ ವಿನಿಮಯ ಮೀಸಲುಗಳು ಚಂಚಲತೆಯನ್ನು ತಡೆಯಲು ಸಹಾಯ ಮಾಡಬಹುದು. ಮಧ್ಯಮ ಅವಧಿಯಲ್ಲಿ, ಸರಕುಗಳ ಬೆಲೆಗಳಲ್ಲಿ ತಿದ್ದುಪಡಿ ವಿಶೇಷವಾಗಿ ತೈಲ ಮತ್ತು ಸ್ಥಿತಿಸ್ಥಾಪಕ ಸೇವೆಗಳ ರಫ್ತನ್ನು ಉತ್ತೇಜಿಸಬಹುದು.