ಜಾಗತಿಕ ಮಾರುಕಟ್ಟೆಯಿಂದ ಮಿಶ್ರ ಸಂಕೇತಗಳ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ವರ್ಷದ ಕನಿಷ್ಠ ಬೆಲೆಯನ್ನು ಅದು ದಾಖಲಿಸಿದೆ. ಬೆಳ್ಳಿಯ ಬೆಲೆಯೂ ಇಂದು 400 ರೂಪಾಯಿಗಿಂತ್ಲೂ ಅಧಿಕ ಕುಸಿತ ಕಂಡಿರೋದು ವಿಶೇಷ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ, 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 250 ರೂಪಾಯಿ ಕುಸಿತದೊಂದಿಗೆ 49,958 ರೂಪಾಯಿಗೆ ಬಂದಿಳಿದಿದೆ. MCX ನಲ್ಲಿ ಬೆಳ್ಳಿಯ ಬೆಲೆ ಬೆಳಿಗ್ಗೆ 480 ರೂಪಾಯಿ ಕಡಿಮೆಯಾಗಿದ್ದು, ಕೆಜಿ ಬೆಳ್ಳಿಗೆ 55,130 ರೂಪಾಯಿ ಆಗಿದೆ. ವಹಿವಾಟಿನ ಆರಂಭದಲ್ಲಿ ಬಂಗಾರದ ಬೆಲೆ 50 ಸಾವಿರದ ಗಡಿ ದಾಟಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ ಬೆಲೆ ಇಳಿಮುಖವಾಗಿದೆ.
ಅದರ ಹಿಂದಿನ ಮುಕ್ತಾಯದ ಬೆಲೆಗಿಂತ ಸುಮಾರು 0.5 ಪ್ರತಿಶತದಷ್ಟು ಇಳಿಕೆಯಾಗಿದೆ. ಬೆಳ್ಳಿಯು ಪ್ರಸ್ತುತ ಅದರ ಹಿಂದಿನ ಮುಕ್ತಾಯದ ಬೆಲೆಗಿಂತ 0.88 ಶೇಕಡಾ ಇಳಿಕೆಯಲ್ಲಿ ವಹಿವಾಟು ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,691.40 ಡಾಲರ್ ಆಗಿತ್ತು. ಬೆಳ್ಳಿಯ ಬೆಲೆ ಕೂಡ ಪ್ರತಿ ಔನ್ಸ್‌ಗೆ 18.62 ಡಾಲರ್‌ಗೆ ಕುಸಿದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಶಕ್ತಿ ಹೆಚ್ಚುತ್ತಿರುವ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಮುಖವಾಗಿದೆ. ಹೂಡಿಕೆದಾರರು ಪ್ರಸ್ತುತ ಡಾಲರ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ, ಆದರೆ ಚಿನ್ನದಲ್ಲಿ ಮಾರಾಟ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಸರ್ಕಾರವು ಚಿನ್ನದ ಆಮದು ಸುಂಕವನ್ನು ಹೆಚ್ಚಿಸಿದ ನಂತರ, ಅದರ ಬಳಕೆ ಕಡಿಮೆಯಾಗಿದೆ. ಹಾಗಾಗಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಕುಸಿತ ಕಾಣಬಹುದು.