ಸ್ನೇಹಿತರ ಮದುವೆ ಕಾರ್ಯಕ್ರಮ ಅಂದ್ರೆ ಬಹುತೇಕರು ಬಹಳ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಅದರಲ್ಲೂ ಆತ್ಮೀಯ ಸ್ನೇಹಿತರೆಂದ್ರೆ ಅವರನ್ನು ಮದುವೆಗೆ ಕರೆಯದಿರಲು ಸಾಧ್ಯವೇ..? ಆದರೆ, ಇಲ್ಲೊಬ್ಬಳು ರೂಪದರ್ಶಿಗೆ ಆಕೆಯ ಆತ್ಮೀಯ ಸ್ನೇಹಿತೆ ಮದುವೆಯ ಕರೆಯೋಲೆಯನ್ನೇ ನೀಡಿಲ್ವಂತೆ. ಮದುವೆಯಲ್ಲಿ ತನಗಿಂತ ತನ್ನ ಗೆಳತಿಯೇ ಸುಂದರವಾಗಿ ಕಾಣುತ್ತಾಳೆ ಎಂಬ ಉದ್ದೇಶದಿಂದ ತನಗೆ ಆಹ್ವಾನ ನೀಡಿಲ್ಲ ಎಂದು ಮಾಡೆಲ್ ಹೇಳಿಕೊಂಡಿದ್ದಾಳೆ.
ಜರ್ಮನ್ ನ ಮಾಡೆಲ್ ಆಗಿರುವ ಅಲೆನಾ ಎಂಬಾಕೆಯೇ ಈ ಆರೋಪವನ್ನು ಮಾಡಿದವಳು. ವಧುವಿಗಿಂತ ತಾನು ಸುಂದರವಾಗಿ ಕಾಣುತ್ತೇನೆ ಎಂಬ ಉದ್ದೇಶದಿಂದ ಸ್ನೇಹಿತೆ ತನಗೆ ಆಹ್ವಾನವನ್ನೇ ನೀಡಿಲ್ಲ ಎಂದು ಟಿಕ್ ಟಾಕ್ ನಲ್ಲಿ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.
ಟಿಕ್‌ಟಾಕ್‌ನಲ್ಲಿ 95,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮಾಡೆಲ್ ವಿಡಿಯೋವನ್ನು ಹಂಚಿಕೊಂಡು ತನ್ನ ಮನದ ನೋವನ್ನು ಹೇಳಿಕೊಂಡಿದ್ದಾಳೆ. ತನ್ನ ಆಪ್ತ ಸ್ನೇಹಿತೆ ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ. ಏಕೆಂದ್ರೆ ತನಗಾಗಿ ಆಕೆ ಆಯ್ಕೆ ಮಾಡಿದ್ದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತೇನೆ ಎಂಬುದಕ್ಕಾಗಿ ಆಹ್ವಾನ ನೀಡಿಲ್ಲ ಎಂದು ಅಲೆನಾ ಹೇಳಿದ್ದಾಳೆ. ಈ ವಿಡಿಯೋವನ್ನು 5.5 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಭಾರಿ ವೈರಲ್ ಆಗಿದೆ.
ಮದುವೆಗೆ ಹೋಗದಿದ್ದರೂ ಸಹ ಅಲೆನಾ, ಸ್ನೇಹಿತೆಯ ಮದುವೆಗೆಂದು ತೆಗೆದುಕೊಂಡಿದ್ದ ಉಡುಪಿನಲ್ಲಿ ಫೋಟೋ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ.