
ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಅನುಕೂಲಕರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಮನೆಯಲ್ಲೇ ಕುಳಿತು ಬೇಕಾಗಿದ್ದನ್ನು ಖರೀದಿಸಬಹುದು. ಗ್ರಾಹಕರು ಕೊಂಡುಕೊಂಡ ವಸ್ತುಗಳು ಮನೆಬಾಗಿಲಿಗೇ ಬರುತ್ತವೆ. ಇದರ ಜೊತೆಗೆ ಹಲವು ಬಗೆಯ ಡಿಸ್ಕೌಂಟ್‌ಗಳು ಕೂಡ ಲಭ್ಯವಿರುತ್ತವೆ. ಆದಾಗ್ಯೂ ಆನ್‌ಲೈನ್‌ನಲ್ಲಿ ಉತ್ತಮ ಡೀಲ್‌ಗಳನ್ನು ಪಡೆಯುವಾಗ, ಉತ್ಪನ್ನಗಳು ಸಮಯಕ್ಕೆ ಸರಿಯಾಗಿ ಬರುವುದನ್ನು ಖಚಿತಪಡಿಸಿಕೊಳ್ಳಬೇಕು.
ಖರೀದಿಸಿದ ವಸ್ತುಗಳ ಗುಣಮಟ್ಟ ನಿರೀಕ್ಷೆಗೆ ಅನುಗುಣವಾಗಿದೆಯೇ ? ಐಟಂಗಳು ಸರಿಯಾದ ವಾರಂಟಿಯಿಂದ ಆವರಿಸಲ್ಪಟ್ಟಿದೆಯೇ ? ಉತ್ಪನ್ನಗಳನ್ನು ಹಿಂದಿರುಗಿಸುವ ಆಯ್ಕೆ ಇದೆಯೇ ಎಂಬುದನ್ನೆಲ್ಲ ಶಾಪಿಂಗ್ ಮಾಡುವ ಮೊದಲು ಪರಿಶೀಲಿಸಬೇಕು. ಆನ್‌ಲೈನ್ ಶಾಪಿಂಗ್ನಲ್ಲಿ ಗ್ರಾಹಕರು ಮೋಸ ಹೋದ ಅನೇಕ ಉದಾಹರಣೆಗಳಿವೆ. ಆನ್‌ಲೈನ್ ವಂಚನೆಯಿಂದ ಪಾರಾಗಲು ಗ್ರಾಹಕರು ಜಾಗರೂಕರಾಗಿರಬೇಕು.
ನಕಲಿ ವೆಬ್‌ಸೈಟ್ – ವಂಚಕರು ನಕಲಿ ಶಾಪಿಂಗ್ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ರಚಿಸಿ ಹಣ ಪೀಕುತ್ತಾರೆ. ಈ ಸೈಟ್‌ಗಳು ಕಾನೂನುಬದ್ಧವಾಗಿ ಕಾಣಿಸಬಹುದು, ಆದರೆ ಅವುಗಳನ್ನು ಗ್ರಾಹಕರ ಸೂಕ್ಷ್ಮ ಮಾಹಿತಿ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಕದಿಯಲು ವಿನ್ಯಾಸಗೊಳಿಸಲಾಗಿರುತ್ತದೆ. ಹಾಗಾಗಿ ಶಾಪಿಂಗ್ ಮಾಡುವ ಮುನ್ನ ಸೈಟ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಿ.
ನಕಲಿ ವಿಮರ್ಶೆ – ಸಾಮಾನ್ಯವಾಗಿ ಎಲ್ಲರೂ ಉತ್ಪನ್ನಗಳ ವಿಮರ್ಶೆಯನ್ನು ನೋಡಿ ಖರೀದಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಕಲಿ ವೆಬ್‌ಸೈಟ್‌ಗಳು ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳ ಬಗ್ಗೆ ನಕಲಿ ವಿಮರ್ಶೆಗಳನ್ನು ನೀಡುತ್ತಾರೆ. ಹೆಚ್ಚಿನ ಜನರು ಆನ್‌ಲೈನ್ ಸ್ಟೋರ್‌ಗಳ ನಕಲಿ ವಿಮರ್ಶೆಗಳನ್ನು ನಂಬುತ್ತಾರೆ, ನಂತರ ವಂಚನೆಗೆ ಬಲಿಯಾಗುತ್ತಾರೆ.
ಸುರಕ್ಷಿತ ಇಂಟರ್ನೆಟ್ ಸಂಪರ್ಕದಿಂದ ಆರ್ಡರ್ ಮಾಡಿ – ನಿಮ್ಮ ಕಂಪ್ಯೂಟರ್ ಅನ್ನು ಎಂಟಿವೈರಸ್‌ನಿಂದ ರಕ್ಷಿಸದಿದ್ದರೆ ನಿಮ್ಮ ಹಣಕಾಸಿನ ಮಾಹಿತಿ ಮತ್ತು ಪಾಸ್‌ವರ್ಡ್‌ಗಳು ಕಳ್ಳತನವಾಗುವ ಅಪಾಯವಿರುತ್ತದೆ. ಅಸುರಕ್ಷಿತ ಇಂಟರ್ನೆಟ್ ಸಂಪರ್ಕದಿಂದಲೂ ಡೇಟಾ ಕಳ್ಳತನದ ಅಪಾಯವಿದೆ. ಹಾಗಾಗಿ ಸುರಕ್ಷಿತ ಸಂಪರ್ಕವನ್ನು ಬಳಸಿ ಮತ್ತು ಕಂಪ್ಯೂಟರ್‌ನ ಫೈರ್‌ವಾಲ್ ಆನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ವೈರ್‌ಲೆಸ್ ನೆಟ್‌ವರ್ಕ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದರೆ, ಅದನ್ನು ಎನ್‌ಕ್ರಿಪ್ಟ್ ಮಾಡಬೇಕಾಗುತ್ತದೆ. ಸಾರ್ವಜನಿಕ ನೆಟ್‌ವರ್ಕ್‌ಗಳನ್ನು ಬಳಸಿ ಯಾವುದೇ ಹಣಕಾಸಿನ ವಹಿವಾಟುಗಳನ್ನು ಮಾಡಬೇಡಿ.
ಸೈಟ್ ಸುರಕ್ಷಿತವಾಗಿದೆಯೇ ಪರಿಶೀಲಿಸಿ – ಶಾಪಿಂಗ್ ಸೈಟ್‌ನಲ್ಲಿ ಯಾವುದೇ ವೈಯಕ್ತಿಕ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸುವ ಮೊದಲು, ಪುಟದಲ್ಲಿನ ವೆಬ್ ವಿಳಾಸವು “https:” ನೊಂದಿಗೆ ಪ್ರಾರಂಭವಾಗುತ್ತದೆಯೇ ಎಂದು ಪರಿಶೀಲಿಸಿ, ಇದು “http:” ಎಂದಿರಬಾರದು. ಈ ಚಿಕ್ಕ ‘s’ ನಿಮಗೆ ವೆಬ್‌ಸೈಟ್ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.