
ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಹೊಡೆತ ನೀಡಿದೆ. ಕೊರೊನಾ ಕಾರಣಕ್ಕೆ ಶಾಲಾ -ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನೀಡಲಾಗುತ್ತಿದೆ.
ಆನ್ಲೈನ್ ಕ್ಲಾಸ್ ಗಾಗಿ ಸ್ಮಾರ್ಟ್ ಫೋನ್ ಅನಿವಾರ್ಯವಾಗಿದ್ದು, ಆದರೆ ಇದನ್ನು ಖರೀದಿಸಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಮನಕಲಕುವ ಘಟನೆಯೊಂದರಲ್ಲಿ ಆನ್ಲೈನ್ ಕ್ಲಾಸ್ ಗಾಗಿ ಮೊಬೈಲ್ ಖರೀದಿಸಲಾಗದ ಸ್ಥಿತಿಯಲ್ಲಿರುವ ಸಹೋದರಿಯರಿಬ್ಬರು ತಮಗೆ ನೆರವು ನೀಡುವಂತೆ ಕೋರಿ ಫಲಕ ಹಿಡಿದು ನಿಂತಿರುವ ಘಟನೆ ಕೊಪ್ಪಳದ ಗಾಂಧಿನಗರದಲ್ಲಿ ನಡೆದಿದೆ.
ಪ್ರೀತಿ ಹಾಗೂ ಗಿರಿಜಾ ಎಂಬ ಈ ಸಹೋದರಿಯರು ಕೊಪ್ಪಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರೀತಿ 10 ನೇ ತರಗತಿಯಲ್ಲಿದ್ದರೆ ಗಿರಿಜಾ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ಇವರ ತಂದೆ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ತಾಯಿ ಮಲ್ಲಮ್ಮ ನಿಂಬೆಹಣ್ಣು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಓರ್ವ ಸಹೋದರ ಕೂಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಸೋದರಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಮೊಬೈಲ್ ಇಲ್ಲದ ಕಾರಣ ಆನ್ಲೈನ್ ಕ್ಲಾಸ್ ಗಾಗಿ ಸಹೋದರಿಯರು ಮೊಬೈಲ್ ಹೊಂದಿದವರನ್ನು, ಆಶ್ರಯಿಸಬೇಕಾಗಿದ್ದು ಈ ಕಾರಣಕ್ಕೆ ಬಹಳಷ್ಟು ಬಾರಿ ಕ್ಲಾಸ್ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ತಮಗೆ ಮೊಬೈಲ್ ಖರೀದಿಸಲು ನೆರವು ನೀಡುವಂತೆ ಈ ಸಹೋದರಿಯರು ಫಲಕ ಹಿಡಿದು ಮನವಿ ಮಾಡಿಕೊಂಡಿದ್ದಾರೆ.
