ಬೆಂಗಳೂರು: ಇಂದು ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡಲಾಯ್ತು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪುತ್ಥಳಿ ಅನಾವರಣ ಮಾಡಿದರು. ಈ ವೇಳೆ ಸ್ಟಾಚು ಮುಂದೆ ಮೋದಿ, ರಾಜ್ಯಪಾಲರು, ಸಿಎಂ, ಸುಧಾಮೂರ್ತಿ, ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ಸಚಿವರು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ತೆಗೆಸಿಕೊಳ್ಳುವ ವೇಳೆ ಆರ್.ಅಶೋಕ್ ಮಾಡಿದ ಒಂದು ತಪ್ಪು ಇದೀಗ ಟೀಕೆಗೆ ಗುರಿಯಾಗಿದೆ.
ಹೌದು, ಆರ್.ಅಶೋಕ್ ಫೋಟೋ ತೆಗೆಸಿಕೊಳ್ಳುವ ವೇಳೆ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ವಿಚಾರ ಭಕ್ತರ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಈ ವಿಚಾರವಾಗಿ ಇದೀಗ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು, ಆರ್. ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ ಎಂದು ಟ್ವೀಟ್ ಮಾಡಿದೆ.
ಜೊತೆಗೆ ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ ಎಂದು ಸವಾಲು ಹಾಕಲಾಗಿದೆ. ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕಿಡಿ ಕಾರಿದ್ದಾರೆ. ಶ್ರೀಗಳಿಗೆ ಅವರದ್ದೇ ಆದ ಒಂದು ಗೌರವ ಇರುತ್ತದೆ. ಆದರೆ ಆರ್.ಅಶೋಕ್ ಮಾಡಿದ ಒಂದು ಕೆಲಸ ಟೀಕೆಗೆ ಗುರಿಯಾಗುವಂತೆ ಮಾಡಿದೆ. ಕಾಂಗ್ರೆಸ್ ಅಷ್ಟೆ ಅಲ್ಲದೆ ಒಕ್ಕಲಿಗ ಸಮುದಾಯದ ಜನ ಕೂಡ ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.