ಸ್ವಂತವಾಗಿ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವುದು ಜಟಿಲವಾದ ಕೆಲಸ. ಅದರಲ್ಲೂ ಇದನ್ನು ಮೊದಲ ಬಾರಿಗೆ ಮಾಡುತ್ತಿದ್ದರೆ ಪ್ರಕ್ರಿಯೆಗಳು ಕಷ್ಟವೆನಿಸಬಹುದು. ಆದಾಗ್ಯೂ, ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಾಗಿರುವ ಇತ್ತೀಚಿನ ತಿದ್ದುಪಡಿಗಳು, ಯಾವುದೇ ತೆರಿಗೆ ವೃತ್ತಿಪರರ ಸಹಾಯವಿಲ್ಲದೆ ಐಟಿಆರ್ ಅನ್ನು ಸಲ್ಲಿಸುವುದನ್ನು ಸುಲಭಗೊಳಿಸಿದೆ.
ಸಂಪೂರ್ಣ ITR ಫೈಲಿಂಗ್ ಪ್ರಕ್ರಿಯೆ ಈಗ ಮೊದಲಿಗಿಂತಲೂ ಸರಳ. ವಿಶೇಷವಾಗಿ ಸಂಬಳವನ್ನು ಹೊರತುಪಡಿಸಿ ಬೇರೆ ಯಾವುದೇ ಆದಾಯದ ಮೂಲವನ್ನು ಹೊಂದಿರದ ಉದ್ಯೋಗಿಗಳಿಗೆ ಇದು ಸರಳವೆನಿಸುತ್ತದೆ. ನೀವು ಕೂಡ ಆದಾಯ ತೆರಿಗೆ ಪಾವತಿಸಲು ಹೊರಟಿದ್ದರೆ ಕೆಳಗಿನ ಐದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಎಲ್ಲಾ ಅಗತ್ಯ ದಾಖಲೆಗಳು
ITR ಅನ್ನು ಫೈಲ್ ಮಾಡಲು ನಿಮಗೆ ಫಾರ್ಮ್ 16, 26AS, AIS/TIS, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಹೂಡಿಕೆ ದಾಖಲೆಗಳು, ಬಾಡಿಗೆ ರಸೀದಿಗಳು ಮುಂತಾದ ವಿವಿಧ ದಾಖಲೆಗಳು ಬೇಕಾಗುತ್ತವೆ. ಆದ್ದರಿಂದ ITR ರಿಟರ್ನ್ ಫೈಲಿಂಗ್ ಅನ್ನು ಪ್ರಾರಂಭಿಸುವ ಮೊದಲು, ನಿಮ್ಮ ಬಳಿ ಎಲ್ಲಾ ದಾಖಲೆಗಳನ್ನು ಭೌತಿಕವಾಗಿ ಅಥವಾ ಅದರ ಸಾಫ್ಟ್ ಕಾಪಿಗಳು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಆದಾಯದ ಮೂಲಗಳು
ಎಲ್ಲಾ ಆದಾಯದ ಮೂಲಗಳ ಬಗ್ಗೆ ನಿಮಗೆ ಸ್ಪಷ್ಟವಾದ ತಿಳುವಳಿಕೆ ಇದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಉದಾಹರಣೆಗೆ ಸಂಬಳ, ಮನೆ ಬಾಡಿಗೆ, ವ್ಯಾಪಾರ ಆದಾಯ, ಬಂಡವಾಳ ಲಾಭದ ಆದಾಯ ಇತ್ಯಾದಿ. ಸರಿಯಾದ ಫಾರ್ಮ್‌ಗಳನ್ನು ಭರ್ತಿ ಮಾಡಲು ಮತ್ತು ನೀವು ಅರ್ಹರಾಗಿರುವ ಎಲ್ಲಾ ಕಡಿತಗಳನ್ನು ಕ್ಲೈಮ್ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ಸೂಕ್ತ ಐಟಿಆರ್ ಫಾರ್ಮ್ ಅನ್ನು ಆಯ್ದುಕೊಳ್ಳಿ
ವಿವಿಧ ರೀತಿಯ ಆದಾಯ ಮತ್ತು ತೆರಿಗೆದಾರರಿಗೆ ವಿವಿಧ ITR ಫಾರ್ಮ್‌ಗಳಿವೆ. ನಿಮ್ಮ ಆದಾಯದ ಮೂಲಗಳು ಮತ್ತು ತೆರಿಗೆದಾರರ ವರ್ಗವನ್ನು ಆಧರಿಸಿ, ಸರಿಯಾದ ITR ಫಾರ್ಮ್ ಅನ್ನು ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ತೆರಿಗೆ ವಿಧಿಸಬಹುದಾದ ಆದಾಯದ ಲೆಕ್ಕಾಚಾರ
ITR ಅನ್ನು ಸಲ್ಲಿಸುವ ಮೊದಲು ನಿಮ್ಮ ತೆರಿಗೆಯ ಆದಾಯವನ್ನು ಲೆಕ್ಕಹಾಕಬೇಕು. ಇದಕ್ಕಾಗಿ ಆದಾಯ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಬಳಸಬೇಕು.
ರಿಯಾಯಿತಿ
ITR ಅನ್ನು ಸಲ್ಲಿಸುವಾಗ, ತೆರಿಗೆದಾರರು ಸೆಕ್ಷನ್ 80C, ಸೆಕ್ಷನ್ 80D, ಇತ್ಯಾದಿಗಳ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಕ್ಲೈಮ್ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಇದು ನಿಮ್ಮ ತೆರಿಗೆಯ ಆದಾಯವನ್ನು ಕಡಿಮೆ ಮಾಡಲು ಮತ್ತು ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.