ಮುಂಬೈ: ಕೊರೋನಾ ಲಾಕ್ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಕೂಡಲೇ ಆತನ ಸಹಾಯಕ್ಕೆ ಧಾವಿಸಿದ ಮುಂಬೈ ಪೊಲೀಸರು ದುಡುಕಿನ ನಿರ್ಧಾರ ಮಾಡದಂತೆ ಸಲಹೆ ನೀಡಿದ್ದು, ಆತನ ಜೀವ ಉಳಿಸಿದ್ದಾರೆ.
ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು 30 ವರ್ಷದ ವ್ಯಕ್ತಿ ಅಮೀರ್ ಎಂದು ಗುರುತಿಸಲಾಗಿದೆ. ತೀವ್ರ ಹಣಕಾಸಿನ ಸಮಸ್ಯೆಯಿಂದ ಮುಗ್ಗರಿಸಿರುವ ಈತ, ಆತ್ಮಹತ್ಯೆಯ ಹಾದಿ ತುಳಿದಿದ್ದ. ಕೆಲವು ಮೊತ್ತಗಳನ್ನು ಪಾವತಿಸಲು ಗ್ರಾಹಕರ ಹಣವನ್ನು ಉಪಯೋಗಿಸಿದ್ದ. ಇತ್ತ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ಕಂಗಾಲಾಗಿದ್ದಾನೆ.
ಗ್ರಾಹಕರು ತನ್ನ ಮೇಲೆ ಕೇಸ್ ದಾಖಲಿಸುವ ಭೀತಿಯೂ ಈತನಿಗಿತ್ತು. ಇದರಿಂದ ಮಾನಸಿಕವಾಗಿ ಜರ್ಝರಿತನಾಗಿದ್ದ ಅಮೀರ್, ಎರಡು ಪುಟಗಳಷ್ಟು ಪತ್ರ ಬರೆದು ಟ್ವಿಟ್ಟರ್ ನಲ್ಲಿ ಮುಂಬೈ ಪೊಲೀಸ್ ಖಾತೆಯನ್ನು ಟ್ಯಾಗ್ ಮಾಡುವ ಮೂಲಕ ಪೋಸ್ಟ್ ಮಾಡಿದ್ದಾನೆ.
ಜಾರಕಿಹೊಳಿ ಬ್ರದರ್ಸ್ ಆಟಕ್ಕೆ ಮತ್ತೆ ಮುದುಡಿದ ಕಮಲ: ಸ್ಥಳೀಯ ಸಂಸ್ಥೆಯಯಲ್ಲೂ ಬಿಜೆಪಿಗೆ ಬಿಗ್ ಶಾಕ್
ಅಮೀರ್ ನ ಪೋಸ್ಟ್ ನೋಡಿದ ಮುಂಬೈ ಸೈಬರ್ ಪೊಲೀಸರು, ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಶೀಘ್ರ ದಲ್ಲೇ ಆತನನ್ನು ಪತ್ತೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಬುದ್ಧಿವಾದ ಹೇಳಿದ್ದಾರೆ. ಚರ್ಚೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಆತನಿಗೆ ಸಲಹೆ ನೀಡಿದ್ದಾರೆ. ಯಾವುದೇ ಜಟಿಲ ಸಮಸ್ಯೆಯನ್ನು ನಿವಾರಿಸಬಹುದು ಎಂದು ಪೊಲೀಸರು ತಿಳಿಸಿದ್ದು, ತನ್ನ ಪ್ರೀತಿಪಾತ್ರರಿಗೆ ತಾನು ಅಮೂಲ್ಯ ಅನ್ನೋದನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿ ಹೇಳಿದ್ದಾರೆ.
ಈ ಸಂಬಂಧ ಮುಂಬೈ ಪೊಲೀಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ಉತ್ತಮ ಕಾರ್ಯಕ್ಕಾಗಿ ನೆಟ್ಟಿಗರು ಪೊಲೀಸರನ್ನು ಅಭಿನಂದಿಸಿದ್ದಾರೆ. ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆ ವಿಷಯಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಇತರರು ಹೇಳಿದ್ದಾರೆ.