ಆತ್ಮಹತ್ಯೆಗೆ ಪ್ರಯತ್ನಪಟ್ಟು ಮೊಬೈಲ್ ಟವರ್ ಹತ್ತಿದ ಮಹಿಳೆಯನ್ನು ಕೊನೆಗೆ ಕಣಜಗಳಿಂದ ರಕ್ಷಿಸಲಾದ ಘಟನೆ ಕೇರಳದಲ್ಲಿ ನಡೆದಿದೆ.
ಮೊಬೈಲ್ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯೊಬ್ಬಳು ಬೆದರಿಕೆ ಹಾಕಿದ್ದಳು. ಈ ವೇಳೆ ಟವರ್ ನಲ್ಲಿದ್ದ ಕಣಜಗಳು ಆಕೆಯನ್ನು ಸುತ್ತಿಕೊಂಡಿದ್ದರಿಂದ ನಂತರ ಮಹಿಳೆಯನ್ನು ರಕ್ಷಿಸಲಾಗಿದೆ.
ಸೋಮವಾರ ಸಂಜೆ ಮಹಿಳೆಯು ಕೇರಳದ ಆಲಪ್ಪುಳದ ಕರಾವಳಿಯ ಕಯಂಕುಲಂನಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಅನ್ನು ಏರಿದ್ದಳು. ಪತಿ ತನ್ನ ಮಗುವನ್ನು ವಾಪಸ್ ಕೊಡದಿದ್ದರೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಳು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಕೆಯನ್ನು ಕೆಳಗಿಳಿಸಲು ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.
ಇದ್ದಕ್ಕಿದ್ದಂತೆ, ಕಣಜಗಳು ಅವಳ ಸುತ್ತಲೂ ಸುತ್ತಿಕೊಂಡಿದ್ದು, ಕೆಲವು ಆಕೆಯನ್ನು ಕಚ್ಚಿದೆ. ಇದರಿಂದ ಗಾಬರಿಯಿಂದ ಮಹಿಳೆ ವೇಗವಾಗಿ ಟವರ್ ನಿಂದ ಕೆಳಗಿಳಿಯಲು ಮುಂದಾಗಿದ್ದಾಳೆ. ಕಣಜಗಳ ಹಿಂಡು ತನ್ನ ಸುತ್ತಲೂ ಸುತ್ತುವರಿದಾಗ ಭೀತಿಯಿಂದ ಕಿರುಚಿದ್ದಾಳೆ.
ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಭದ್ರವಾಗಿ ಹಿಡಿದಿದ್ದ ಸುರಕ್ಷತಾ ಜಾಲದ ಮೇಲೆ ಮೇಲಿನಿಂದ ಕೆಳಗೆ ಸುರಕ್ಷಿತವಾಗಿ ಹಾರಿದ್ದಾಳೆ. ಒಂದು ವೇಳೆ ಕಣಜಗಳು ಇಲ್ಲದೇ ಇದ್ದಿದ್ದರೆ ಆಕೆಯನ್ನು ಕೆಳಗಿಳಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ನಿವಾಸಿಯಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಆಕೆಯ ಪತಿ ಅಥವಾ ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.