
ಇಂದಿನ ಆಧುನಿಕ ಯುಗದಲ್ಲಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗದವರು ಯಾರೂ ಇಲ್ಲವೇನೋ. ಗಂಡ ಕಚೇರಿಯಿಂದ ತಡವಾಗಿ ಬಂದರೂ ಆತಂಕ, ಮಕ್ಕಳು ಸರಿಯಾಗಿ ಓದದಿದ್ದರೂ ಆತಂಕ. ಇವನ್ನೆಲ್ಲಾ ಸಂಭಾಳಿಸಿಕೊಂಡು ಉತ್ತಮ ಆರೋಗ್ಯ ಹೇಗೆ ಪಡೆಯಬಹುದು ನಿಮಗೆ ಗೊತ್ತೇ?
ಆತಂಕ ಹೆಚ್ಚಿದಷ್ಟೂ ನಿಮ್ಮ ದೇಹದ ಮೇಲೆ ಹಲವು ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ತಪ್ಪಿಸಲು ಸಮಾಧಾನಚಿತ್ತರಾಗಿರುವುದು ಬಹಳ ಮುಖ್ಯ. ಮೊದಲಿಗೆ ಯಾವುದೇ ಆತಂಕದ ಸನ್ನಿವೇಶ ಬಂದಾಗ ಆಳವಾದ ಉಸಿರನ್ನು ತೆಗೆದುಕೊಳ್ಳಲು ಕಲಿಯಿರಿ. ಇದರಿಂದ ನಿಮಗೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ.
ಎಷ್ಟೇ ಆತಂಕದ ಸನ್ನಿವೇಶ ಎದುರಾದರೂ ಊಟ, ತಿಂಡಿ ಬಿಡಬೇಡಿ. ಇದು ನಿಮ್ಮ ಆರೋಗ್ಯದ ಸ್ಥಿತಿಯನ್ನು ಬಿಗಡಾಯಿಸಬಹುದು. ತಲೆನೋವು ವಾಂತಿಯ ಲಕ್ಷಣ ಕಂಡು ಬಂದೀತು. ಗ್ಯಾಸ್ಟ್ರಿಕ್ ಸಮಸ್ಯೆಯೂ ಉಲ್ಬಣಿಸಬಹುದು. ಇದನ್ನು ತಪ್ಪಿಸಲು ಹೊತ್ತಿಗೆ ಸರಿಯಾಗಿ ಊಟ ಮಾಡಿ.
ಸಮಸ್ಯೆಯನ್ನು ಸಹಜವಾಗಿ ಸ್ವೀಕರಿಸಿ. ಅದರ ಬಗ್ಗೆ ಹೆಚ್ಚು ಚಿಂತೆ ಮಾಡಿದಷ್ಟು ನೀವು ದುರ್ಬಲರಾಗುತ್ತಾ ಹೋಗುತ್ತೀರಿ. ಹಾಗಾಗಿ ಸಮಸ್ಯೆಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಯೋಚಿಸಿ. ಯೋಗ ಮಾಡಿ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವುದನ್ನು ಕಲಿಯಿರಿ.