ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಅನ್ ಲಾಕ್ ಆರಂಭವಾಗಿದ್ದು, ಆಟೋ, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಹೊಸ ಷರತ್ತುಗಳನ್ನು ವಿಧಿಸಿದೆ.
ಅನ್ ಲಾಕ್ ವೇಳೆ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಎಂದಿನಂತೆ ವಾಹನ ಚಲಾಯಿಸುವಂತಿಲ್ಲ ಎಂದು ಸೂಚಿಸಿರುವ ಬಿಬಿಎಂಪಿ ಹೊಸ ಷರತ್ತುಗಳನ್ನು ವಿಧಿಸಿದ್ದು, ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿದೆ.
ಅನ್ ಲಾಕ್ ಸಂದರ್ಭದಲ್ಲಿ ಎಂದಿನಂತೆ ವಾಹನಗಳನ್ನು ರಸ್ತೆಗಿಳಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಸಿರುವ ಪಾಲಿಕೆ, ಲಸಿಕೆ ಪಡೆದ ಚಾಲಕರಿಗೆ ಮಾತ್ರ ವಾಹನ ಚಲಾಯಿಸಲು ಅವಕಾಶ ನೀಡಿದೆ. ವಾಹನದ ಭಾಗಗಳಿಗೆ ಸ್ಯಾನಿಟೈಸ್ ಕಡ್ಡಾಯಗೊಳಿಸಿದೆ.
ಪ್ರಯಾಣಿಕರು ಹಾಗೂ ಚಾಲಕರ ನಡುವೆ ಪರದೆ ಇರಬೇಕು. ಆಟೋ ಮತ್ತು ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ, ಎಲ್ಲಾ ಪ್ರಯಾಣಿಕರು ಹಾಗೂ ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು ಸೂಚನೆ ನೀಡಿದೆ.