ಮುದ್ದಾಗಿ ಸಾಕಿದ ನಾಯಿಗಳೇ ಮಕ್ಕಳ ಮೇಲೆ ದಾಳಿ ಮಾಡ್ತಿರೋ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ಗಾಜಿಯಾಬಾದ್‌ನ ಉದ್ಯಾನವನವೊಂದರಲ್ಲಿ ಸಾಕಿದ ನಾಯಿಯೊಂದು 10 ವರ್ಷದ ಬಾಲಕನಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ.
ಪಿಟ್‌ಬುಲ್ ಜಾತಿಗೆ ಸೇರಿದ ಈ ನಾಯಿ ಬಾಲಕನ ಮುಖಕ್ಕೇ ಕಚ್ಚಿದೆ. ಆತನ ಕೆನ್ನೆಗೆ 150ಕ್ಕೂ ಹೆಚ್ಚು ಹೊಲಿಗೆ ಸಹ ಹಾಕಲಾಯ್ತು. 4 ದಿನಗಳ ಕಾಲ ಬಾಲಕ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ. ಮುಖದ ಮೇಲಾದ ಕಲೆಗಳು ಜೀವನ ಪರ್ಯಂತ ಹಾಗೇ ಉಳಿದುಬಿಡುವ ಆತಂಕ ಸಹ ಎದುರಾಗಿದೆ.
ಗಾಜಿಯಾಬಾದ್‌ನ ಸಂಜಯ್ ನಗರದಲ್ಲಿ ಈ ಘಟನೆ ನಡೆದಿದೆ. ನಾಯಿಯ ಮಾಲೀಕ ಲಲಿತ್ ತ್ಯಾಗಿ, ಸಂಜೆ ಪಿಟ್‌ಬುಲ್ ಅನ್ನು ಪಾರ್ಕ್‌ಗೆ ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದ. ಆತನಿಂದ ತಪ್ಪಿಸಿಕೊಂಡು ಬಂದ ನಾಯಿ ಬಾಲಕನ ಮೇಲೆ ದಾಳಿ ನಡೆಸಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ಸಹ ಲಭ್ಯವಾಗಿವೆ.
ಮನೆಯ ಹೊರಗಿನ ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ ಪಿಟ್‌ಬುಲ್ ಮಗುವಿನ ಮೇಲೆ ದಾಳಿ ಮಾಡಿದೆ. ಮಾಲೀಕ ಪಿಟ್ಬುಲ್ ನಾಯಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ. ಆದ್ರೆ ತಪ್ಪಿಸಿಕೊಂಡ ಶ್ವಾನ ಮೇಲೆ ಹಾರಿ ಬಾಲಕನ ಮುಖವನ್ನೇ ಕಚ್ಚಿದೆ. ಯಾವುದೇ ಪರವಾನಗಿ ಅಥವಾ ನೋಂದಣಿ ಇಲ್ಲದೆ ನಾಯಿ ಸಾಕಿದ್ದ ಮಾಲೀಕನಿಗೆ 5000 ರೂಪಾಯಿ ದಂಡ ಹಾಕಲಾಗಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆತರುವ ಮೊದಲು ಬಾಯಿಗೆ ಟೇಪ್ ಹಾಕುವಂತೆ ನಾಯಿ ಮಾಲೀಕರಿಗೆ ಒತ್ತಾಯಿಸಿದ್ದಾರೆ.