ಮಾರ್ಚ್ 24, ‘ವಿಶ್ವ ಕ್ಷಯರೋಗ ದಿನ’. ಟಿಬಿಯಂತಹ ಅಪಾಯಕಾರಿ ಕಾಯಿಲೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು ಇದರ ನಿಜವಾದ ಉದ್ದೇಶ. ಭಾರತದಲ್ಲಿ ಕ್ಷಯರೋಗದಿಂದ ಬಳಲುತ್ತಿರುವವರ ಸಂಖ್ಯೆ ಅತಿ ಹೆಚ್ಚು. ವಿಶ್ವಾದ್ಯಂತ ಕೂಡ ಪ್ರತಿ ವರ್ಷ ಲಕ್ಷಾಂತರ ರೋಗಿಗಳು ಟಿಬಿಯಿಂದ ಸಾಯುತ್ತಾರೆ.
ವಿಪರೀತ ಕೆಮ್ಮು, ಟಿಬಿ ಕಾಯಿಲೆಯ ಪ್ರಮುಖ ಲಕ್ಷಣ. ನಿಮಗೇನಾದ್ರೂ ಈ ರೀತಿ ಪದೇ ಪದೇ ಕೆಮ್ಮು ಬರ್ತಾ ಇದ್ರೆ ಜಾಗರೂಕರಾಗಿರಿ, ಇಲ್ಲವಾದ್ರೆ ಈ ಕಾಯಿಲೆ ನಿಮಗೆ ಮಾರಕವಾಗಬಹುದು. ನಿರ್ಲಕ್ಷ ಮಾಡಿದ್ರೆ ಟಿಬಿ ಅತ್ಯಂತ ಅಪಾಯಕಾರಿ. ಇದು ಸಾಂಕ್ರಾಮಿಕ ಬ್ಯಾಕ್ಟೀರಿಯಾದ ಕಾಯಿಲೆಯಾಗಿದ್ದು, ನಿರ್ದಿಷ್ಟವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.
ಆದಾಗ್ಯೂ, ಇದು ದೇಹದ ಇತರ ಭಾಗಗಳಲ್ಲಿಯೂ ಸಂಭವಿಸಬಹುದು. ಈ ರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ, ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಹರಡುತ್ತವೆ. ಆದ್ದರಿಂದ, ಟಿಬಿ ರೋಗಿಗಳ ಸುತ್ತಲೂ ಹೋಗುವ ಮೊದಲು ಮಾಸ್ಕ್ ಧರಿಸಿ. ಪ್ರಮುಖವಾಗಿ 2 ವಿಧದ ಟಿಬಿ ಸೋಂಕುಗಳಿವೆ.
ಮೊದಲನೆಯದ್ದು ನಿಷ್ಕ್ರಿಯ ಟಿಬಿ ಮತ್ತು ಎರಡನೇಯದ್ದು ಸಕ್ರಿಯ ಟಿಬಿ. ನಿಷ್ಕ್ರಿಯ ಟಿಬಿಯಲ್ಲಿ, ನೀವು ಸೋಂಕನ್ನು ಹೊಂದಿರುತ್ತೀರಿ, ಆದರೆ ದೇಹದಲ್ಲಿ ಇರುವ ಬ್ಯಾಕ್ಟೀರಿಯಾಗಳು ನಿಷ್ಕ್ರಿಯವಾಗಿರುತ್ತವೆ, ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಥವಾ ಅವು ಸಾಂಕ್ರಾಮಿಕವಲ್ಲ. ಸಕ್ರಿಯ ಟಿಬಿ ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದು ಇತರರಿಗೆ ಹರಡಬಹುದು. ಟಿಬಿ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದ ಹಲವಾರು ವಾರಗಳು ಅಥವಾ ವರ್ಷಗಳ ನಂತರವೂ ಇದು ಸಂಭವಿಸಬಹುದು.
TB ಕಾಯಿಲೆಯಿದ್ದರೂ ಅನೇಕ ಜನರು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಟಿಬಿಯ ಪ್ರಮುಖ ಲಕ್ಷಣವೆಂದರೆ ಕೆಮ್ಮು. ಕೆಮ್ಮಿನೊಂದಿಗೆ ರಕ್ತಮಿಶ್ರಿತ ಕಫ ಕೂಡ ಬರಬಹುದು. ರಾತ್ರಿ ಬೆವರುವುದು, ತೂಕ ಕಡಿಮೆಯಾಗುವುದು, ಜ್ವರ, ಆಯಾಸ, ಶೀತ ಸಹ ಈ ರೋಗದ ಚಿಹ್ನೆಗಳು. ಟಿಬಿಯಿಂದ ದೂರವಿರಲು ಸುಲಭವಾದ ಮಾರ್ಗವೆಂದರೆ ರೋಗಿಗಳಿಂದ ದೂರವಿರುವುದು. ಇದಲ್ಲದೆ ತಂಬಾಕು ಮತ್ತು ಮದ್ಯಪಾನದಿಂದ ದೂರವಿರಿ. ನಿಮಗೆ ಟಿಬಿ ಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಿ. ಸರಿಯಾಗಿ ಔಷಧ ಸೇವನೆ ಮಾಡದೇ ಇದ್ದರೆ ಸಮಸ್ಯೆಯಾಗಬಹುದು. ಹಾಗಾಗಿ ಅಂತಹ ತಪ್ಪು ಮಾಡಬೇಡಿ.