ಎನ್ಇಟಿಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳನ್ನ ನೀಡಿ ಸಾಕಷ್ಟು ವಿರೋಧ ಎದುರಿಸಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಈಗ ಮತ್ತೊಂದು ವಿವಾದಕ್ಕೆ ತುತ್ತಾಗಿದೆ. ಜನವರಿ 4ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಕನ್ನಡ ವಿಷಯದ ಕೀ ಉತ್ತರಗಳಲ್ಲಿ ತಪ್ಪು ಕಂಡುಬಂದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಹೌದು, ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ಪರೀಕ್ಷೆಯ ಕನ್ನಡ ವಿಷಯದ ಕೀ ಉತ್ತರಗಳಲ್ಲಿ ತಪ್ಪು ಕಂಡುಬಂದಿದ್ದು ಆಕ್ಷೇಪ ಸಲ್ಲಿಸಲು ಸಮಯಾವಕಾಶ ನೀಡಿಲ್ಲಾ ಎಂದು ಆರೋಪಿಸಿದ್ದಾರೆ. ಜನವರಿ 4ರಂದು ಪರೀಕ್ಷೆ ಬರೆದಿದ್ದೇವೆ ರಾಷ್ಟ್ರೀಯ ಪರೀಕ್ಷೆ ಏಜೆನ್ಸಿಯ ಜನವರಿ 21ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸುಮಾರು 20 ಕನ್ನಡ ಕೀ ಉತ್ತರಗಳು ತಪ್ಪಾಗಿವೆ. ಪ್ರತಿ ತಪ್ಪು ಕೀ ಉತ್ತರಕ್ಕೆ 1000 ಸೇರಿಸಿ ಒಟ್ಟು 20 ಕೀ ಉತ್ತರಗಳನ್ನು ತಪ್ಪು ಎಂದು ಪ್ರಶ್ನಿಸಿ ಆಕ್ಷೇಪ ಸಲ್ಲಿಸಲು 20 ಸಾವಿರ ರೂಪಾಯಿ ಶುಲ್ಕ ಸಲ್ಲಿಸಬೇಕು. ನಾವೆಲ್ಲರು ಬಡ ವಿದ್ಯಾರ್ಥಿಗಳು ಇಷ್ಟೊಂದು ದುಡ್ಡು ಪಾವತಿಸಲು ಸಾಧ್ಯವಿಲ್ಲ ಎಂದು ಅಭ್ಯರ್ಥಿಗಳು ಅಸಹಾಯಕರಾಗಿ ಕುಳಿತಿದ್ದಾರೆ.
ಅಲ್ಲದೇ ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು 100 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಷ್ಟು ಪ್ರಶ್ನೆಗಳಿಗು ಉತ್ತರಿಸಿದ್ದರು, ಕೆಲವರು 82 ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇನ್ನೂ ಕೆಲವರು 70 ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಎನ್ಇಟಿ ವೆಬ್ಸೈಟ್ ನಲ್ಲಿ ತೋರಿಸುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಜೊತೆಗೆ ಕೀ ಉತ್ತರಗಳು ತಪ್ಪಾಗಿವೆ ಎಂದು ಪ್ರಶ್ನಿಸಿ ಆಕ್ಷೇಪ ಸಲ್ಲಿಸಲು ಸಮಯಾವಕಾಶ ನೀಡಿಲ್ಲ. ಆಕ್ಷೇಪಗಳನ್ನು ಸಲ್ಲಿಸಲು ಇಂದು ಕೊನೆ ದಿನವಾಗಿದೆ. ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ ಮಾಡುವ ತಪ್ಪುಗಳಿಗೆ ನಮ್ಮಂತ ಅಸಹಾಯಕರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಭ್ಯರ್ಥಿಗಳು ಬೇಸರಗೊಂಡಿದ್ದಾರೆ.
ಇನ್ನು ಕನ್ನಡ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ, ಎನ್ಇಟಿ ಕಳೆದ ವರ್ಷ ಡಿಸೆಂಬರ್ 26ರಂದು ಪರೀಕ್ಷೆ ನಡೆಸಿತ್ತು. ಆದ್ರೆ ಅಂದು ನಡೆದ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಕಾಣಿಸಿಕೊಂಡಿದ್ದವು ಎಂದು ಆಕ್ರೋಶ ಎದುರಿಸಿತ್ತು. ಹೀಗಾಗಿ ಜನವರಿ 4 ರಂದು ಮರು ಪರೀಕ್ಷೆ ಮಾಡಲಾಯಿತು.