ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ವೇತನ ಪರಿಷ್ಕರಣೆ ಆದೇಶವನ್ನು ವಿರೋಧಿಸಿ ಆಂಧ್ರಪ್ರದೇಶದ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಫೆಬ್ರವರಿ 7 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ.
11ನೇ ವೇತನ ಪರಿಷ್ಕರಣೆ ಆಯೋಗದ (ಪಿಆರ್ಸಿ) ಶಿಫಾರಸ್ಸುಗಳನ್ನು ಜಾರಿಗೊಳಿಸಿರುವ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಆದೇಶದ ವಿರುದ್ಧ ವಿವಿಧ ನೌಕರರ ಸಂಘಗಳು ಆಕ್ರೋಶ ವ್ಯಕ್ತಪಡಿಸಿವೆ.
ಹೊಸ ಪಿಆರ್ಸಿಯಿಂದ (ವೇತನ ಪರಿಷ್ಕರಣೆ ಸಮಿತಿ) ವೇತನ ಶ್ರೇಣಿಗಳು ಪರಿಷ್ಕರಣೆಯಾಗಿ, ತಮ್ಮ ವೇತನದಲ್ಲಿ ಇಳಿಕೆಯಾಗಬಹುದು ಎಂದು ಆತಂಕಗೊಂಡಿರುವ ನೌಕರರು ಹಾಗೂ ಶಿಕ್ಷಕರು ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಅಮರಾವತಿಯಲ್ಲಿ ‘ಪಿಆರ್ಸಿ ಸಾಧನಾ ಸಮಿತಿ’ಯ ಅಡಿಯಲ್ಲಿ ಹಲವಾರು ನೌಕರರ ಸಂಘಗಳ ಸಭೆ ನಡೆದಿದ್ದು, ಜನವರಿ 24 ರಂದು ಸರ್ಕಾರಕ್ಕೆ ಮುಷ್ಕರದ ನೋಟಿಸ್ ನೀಡಲು ನಿರ್ಧರಿಸಿದ್ದಾರೆ.
ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಅಥವಾ ಕನಿಷ್ಠ ಪಕ್ಷ ತಡೆಹಿಡಿಯಬೇಕು. ಇಲ್ಲದಿದ್ದರೆ ಮಾತುಕತೆಗೂ ಹೋಗದೆ ಅನಿರ್ದಿಷ್ಟವಾಗಿ ಚಳುವಳಿ ನಡೆಸಬೇಕಾಗುತ್ತದೆ ಎಂದು ಹಲವಾರು ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ, ಕೊಡುಗೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಲು ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.
ಜನವರಿ 25 ರಿಂದ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹೊಸ ಪಿಆರ್ಸಿ ವಿರುದ್ಧ ನೌಕರರ ಸಂಘಗಳು ರ್ಯಾಲಿ ಮತ್ತು ಧರಣಿ ಪ್ರತಿಭಟನೆಗಳನ್ನು ನಡೆಸಲಿವೆ. ಇದರ ನಂತರವು 11 ನೇ ಪಿಆರ್ಸಿ ಶಿಫಾರಸುಗಳ ಅನುಷ್ಠಾನವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದಲ್ಲಿ, ಫೆಬ್ರವರಿ 5 ರಿಂದ ಅಸಹಕಾರ ಚಳುವಳಿಯನ್ನ ಆರಂಭಿಸಲಾಗುತ್ತದೆ, ಫೆಬ್ರವರಿ 7 ರಂದು ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಲಾಗುತ್ತದೆ ಎಂದು ನೌಕರರು ಹೇಳಿದ್ದಾರೆ. ಈಗಾಗ್ಲೇ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಜನವರಿ 20ರಿಂದಲೇ ಪ್ರತಿಭಟನೆಗಳನ್ನ ನಡೆಸಲಾಗುತ್ತಿದೆ.