ಊಟದ ಜತೆಗೆ ಉಪ್ಪಿನ ಕಾಯಿ ಇದ್ದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಉಪ್ಪಿನ ಕಾಯಿ ನೋಡಿದರೆ ಸಾಕು ಕೆಲವರ ಬಾಯಲ್ಲಿ ನೀರೂರುತ್ತದೆ.
ಇಲ್ಲಿ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡುವ ಆಂಧ್ರ ಶೈಲಿಯ ಮಾವಿನಕಾಯಿ ಉಪ್ಪಿನಕಾಯಿ ಇದೆ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಮಾವಿನ ಕಾಯಿ ಹೋಳು – 6 ಕಪ್, ಸಾಸಿವೆ – 1 ಕಪ್, ಉಪ್ಪು – 1 ಕಪ್, ಖಾರದ ಪುಡಿ – 1 ಕಪ್, ಅರಿಶಿನ ಪುಡಿ – 1 ಟೇಬಲ್ ಸ್ಪೂನ್, ಮೆಂತೆಕಾಳು – 1 ಟೇಬಲ್ ಸ್ಪೂನ್, ಬೆಳ್ಳುಳ್ಳಿ – 1/2 ಕಪ್, ಸಾಸಿವೆ ಎಣ್ಣೆ – 2 ಕಪ್.
ಮಾಡುವ ವಿಧಾನ:
ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯ ಸಹಾಯದಿಂದ ಒರೆಸಿಕೊಳ್ಳಿ. ಮಾವಿನಕಾಯಿಯಲ್ಲಿ ಸ್ವಲ್ಪವೂ ನೀರು ಇರಬಾರದು. ನಂತರ ಅದನ್ನು ಹದ ಗಾತ್ರದ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಮೆಂತೆಕಾಳು ಹಾಕಿ ಹುರಿದುಕೊಳ್ಳಿ.
ಹಾಗೇ ಸಾಸಿವೆಯನ್ನು ಕೂಡ ಹುರಿದುಕೊಳ್ಳಿ. ಇವೆರಡನ್ನು ಬೇರೆ ಬೇರೆಯಾಗಿ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಕುದಿಸಬೇಡಿ. ನಂತರ ಈ ಎಣ್ಣೆಯನ್ನು ತಣ್ಣಗಾಗಲು ಬಿಟ್ಟುಬಿಡಿ.
ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಖಾರದ ಪುಡಿ, ಅರಿಶಿನಪುಡಿ, ಸಾಸಿವೆ ಪುಡಿ, ಮೆಂತೆ ಪುಡಿ, ಉಪ್ಪು ಹಾಕಿ ಇದಕ್ಕೆ ಮಾವಿನಕಾಯಿ ಪೀಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಬೆಳ್ಳುಳ್ಳಿ ಎಸಳು ಸೇರಿಸಿ, 1 ½ ಕಪ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಗಾಜಿನ ಬಾಟಲಿಗೆ ಹಾಕಿಕೊಂಡು ಅದರ ಮೇಲೆ ಉಳಿದ ½ ಕಪ್ ಎಣ್ಣೆ ಹಾಕಿ ಒಂದು ಮಸ್ಲಿನ್ ಬಟ್ಟೆಯನ್ನು ಬಾಟಲಿಯ ಜಾರಿಗೆ ಬಿಗಿಯಾಗಿ ಕಟ್ಟಿ. 3 ದಿನಗಳ ಕಾಲ ಸೂರ್ಯನ ಬಿಸಿಲಿಗೆ ಇಡಿ.
ಬೆಳಿಗ್ಗೆ ಇಟ್ಟು ಸಂಜೆ ಹೊತ್ತಿಗೆ ಒಳಗಡೆ ಇಡಿ. ನಂತರ ದಿನದ ಉಪಯೋಗಕ್ಕೆ ನಿಮಗೆ ಎಷ್ಟು ಬೇಕೋ ಅಷ್ಟು ಬೇರೊಂದು ಬಾಟಲಿಗೆ ತೆಗೆದುಕೊಂಡು ಊಟದ ಜತೆ ಸವಿಯಿರಿ.