ಬೆಂಗಳೂರು: ಕೇರಳದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದ್ದ ಮಂಕಿಪಾಕ್ಸ್ ಇದೀಗ ಆಂಧ್ರಪ್ರದೇಶದ ವಿಜಯವಾಡಕ್ಕೂ ವ್ಯಾಪಿಸಿರುವ ಆತಂಕ ಎದುರಾಗಿದೆ. ವಿಜಯವಾಡದ ಮಗುವಿನಲ್ಲಿ ಮಂಕಿಪಾಕ್ಸ್ ನಂತಹ ರೋಗ ಲಕ್ಷಣಗಳು ಕಂಡುಬಂದಿವೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುಬೈನಿಂದ ವಿಜಯವಾಡಕ್ಕೆ ಬಂದಿದ್ದ ಕುಟುಂಬದ ಮಗುವಿನಲ್ಲಿ ಮಂಕಿಪಾಕ್ಸ್ ಲಕ್ಷಣ ಕಂಡುಬಂದಿದೆ. ಮಗುವಿನ ಮೈಮೇಲೆ ಗುಳ್ಳೆಯಾಕಾರದ ಸೋಂಕು ಪತ್ತೆಯಾಗಿದ್ದು, ಮಗುವಿನ ಮಾದರಿಯನ್ನು ಪುಣೆ ಲ್ಯಾಬ್ ಗೆ ಕಳುಹಿಸಲಾಗಿದೆ.
ಸಧ್ಯ ಮಗುವನ್ನು ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲ್ಯಾಬ್ ವರದಿ ಬಂದ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.