ಈ ಬಾರಿಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಹೊರತಂದಿರುವ ಪ್ರಣಾಳಿಕೆಯಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿದ್ದು, ಇದರಲ್ಲಿ ಬಜರಂಗದಳ, ಪಿಎಫ್ಐ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದನ್ನು ಈಗ ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಬಜರಂಗದಳ ನಿಷೇಧ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳುತ್ತಿದೆ.
ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನೂ ಆಂಜನೇಯನ ಭಕ್ತನೇ. ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಿಸುತ್ತೇನೆ. ಆದರೆ ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ. ಸಂವಿಧಾನಕ್ಕೆ ಧಕ್ಕೆ ತರುವ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದರೆ ಇವರಿಗೇಕೆ ವಿರೋಧ ಎಂದು ಪ್ರಶ್ನಿಸಿದ್ದಾರೆ.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಏಕೆ ಎಂದು ಕೇಳಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅಲ್ಲದೆ ಬಜರಂಗಿ ಎಂದು ಬಿಜೆಪಿಯವರು ಕ್ಯಾಂಪೇನ್ ಮಾಡುತ್ತಾ ಜನರನ್ನು ಪ್ರಚೋದಿಸುವುದು ಬೇಡ. ಅದರ ಬದಲು ಕಷ್ಟದ ಸಂದರ್ಭದಲ್ಲಿ ಜನರಿಗೆ ಹೇಗೆ ನೆರವಾಗಿದ್ದೇವೆ ಎಂಬುದನ್ನು ವಿವರಿಸಿ ಮತ ಕೇಳಲಿ ಎಂದು ತಿರುಗೇಟು ನೀಡಿದ್ದಾರೆ.