ನವದೆಹಲಿ: ಇದೇ ತಿಂಗಳ 25ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಇದು ಭಾಗಶಃ ಮಾತ್ರ ಗೋಚರಿಸುತ್ತದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ಭಾರತದಲ್ಲಿ ಗೋಚರಿಸುವ ಏಕೈಕ ಭಾಗಶಃ ಸೂರ್ಯಗ್ರಹಣ ಇದಾಗಿದ್ದು, ಈ ಸೂರ್ಯಗ್ರಹಣ ಬಿಟ್ಟರೆ ಇನ್ನು ಇಂಥ ಸೂರ್ಯಗ್ರಹಣ ನಡೆಯುವುದು 2032ರಲ್ಲಿ. ಮುಂದಿನ ಭಾಗಶಃ ಸೂರ್ಯಗ್ರಹಣವು ಮಾರ್ಚ್ 29, 2025 ರಂದು ಸಂಭವಿಸಿದರೂ ಅದು ಭಾರತದಲ್ಲಿ ಗೋಚರಿಸುವುದಿಲ್ಲ.
ಭಾಗಶಃ ಸೂರ್ಯಗ್ರಹಣ ಎಂದರೇನು ?
ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ನಡೆಯುವುದು ಅಮವಾಸ್ಯೆಯಂದು. ಚಂದ್ರನು ಸೂರ್ಯನ ಸಂಪೂರ್ಣ ಮೇಲ್ಮೈ ಪ್ರದೇಶವನ್ನು ಆವರಿಸದಿದ್ದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.
ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯನ ಕಿರಣವು ಭೂಮಿಗೆ ಬೀಳಲು ತಡೆಯಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯಗ್ರಹಣ ಸಂಭವಿಸುತ್ತದೆ. ಕೆಲವೊಮ್ಮೆ ಪೂರ್ತಿಯಾಗಿ ಸೂರ್ಯನಿಗೆ ಚಂದ್ರ ಅಡ್ಡ ಬಂದರೆ ಕೆಲವು ಬಾರಿ ಭಾಗಶಃ ಅಡ್ಡ ಬರುತ್ತಾನೆ. ಈ ಬಾರಿ ಕೂಡಾ ಭಾಗಶಃ ಸೂರ್ಯಗ್ರಹಣ ನಡೆಯುತ್ತಿದೆ.
ಸೂರ್ಯ ಗ್ರಹಣದ ವೇಳೆ ಯಾವುದು ?
ಸೂರ್ಯ ಗ್ರಹಣವು ಅಕ್ಟೋಬರ್ 25, 2022 ರಂದು 08:58 am UTC (02:28 pm IST) ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅದೇ ದಿನ 1:00 pm UTC (06:32 pm IST) ವರೆಗೆ ಇರುತ್ತದೆ. ಆ ದಿನದಂದು ಗರಿಷ್ಠ ಗ್ರಹಣವು ಸುಮಾರು 11:00 am UTC (04:30 pm IST) ಕ್ಕೆ ಸಂಭವಿಸುತ್ತದೆ.
ಸೂರ್ಯಗ್ರಹಣ ಗೋಚರಿಸುವ ಸ್ಥಳಗಳು
ಸೂರ್ಯಗ್ರಹಣವು ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಉರಲ್ ಪರ್ವತಗಳು, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯದಿಂದ ಗೋಚರಿಸುತ್ತದೆ. ಈ ಗ್ರಹಣದ ಗರಿಷ್ಠ ಹಂತವು ರಷ್ಯಾದ ಪಶ್ಚಿಮ ಸೈಬೀರಿಯನ್ ಬಯಲು ಪ್ರದೇಶವಾಗಿದೆ.