ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯದ ಬಾಗಿಲನ್ನು ಅ. 24ರಂದು ತೆರೆಯಲಾಗುವುದು. ಉತ್ತಮ ಮುಂಗಾರು ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಹಾಸನಾಂಬ ಜಾತ್ರಾ ಮಹೋತ್ಸವ ನಡೆಸಲು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಾತನಾಡಿದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಅಕ್ಟೋಬರ್ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿರುತ್ತಾರೆ. 11 ದಿನ ಹಾಸನಾಂಬ ದೇವಿಯ ದರ್ಶನ ಇರಲಿದೆ. ಮೊದಲ ಮತ್ತು ಕೊನೆಯ ದಿನಗಳಂದು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಈ ಬಾರಿ ಸಾವಿರ ರೂಪಾಯಿ ಮತ್ತು 300 ರೂ. ಟಿಕೆಟ್ ಪಡೆದವರಿಗೆ ಒಂದೊಂದು ಲಾಡು ವಿತರಿಸಲಾಗುವುದು. ಸಾರ್ವಜನಿಕರಿಗೆ ಉಚಿತವಾಗಿ ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.